ಪ್ರಧಾನಿ ನೀಡುವ ಹೇಳಿಕೆಗಳನ್ನು ಜನಸಾಮಾನ್ಯರು ನೀಡಿದರೆ ಮಾನಸಿಕ ತಜ್ಞರ ಬಳಿ ಅವರನ್ನು ಕರೆದೊಯ್ಯಲಾಗುತ್ತದೆ: ರಾಹುಲ್ ಗಾಂಧಿ
ರಾಹುಲ್ ಗಾಂಧಿ | PC : PTI
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ನೀಡುತ್ತಿರುವಂತಹ ಹೇಳಿಕೆಗಳನ್ನು ಜನಸಾಮಾನ್ಯರೊಬ್ಬರು ನೀಡಿದ್ದರೆ ಅವರನ್ನು ನೇರವಾಗಿ ಮಾನಸಿಕ ತಜ್ಞರ ಬಳಿ ಕರೆದೊಯ್ಯಲಾಗುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಈಶಾನ್ಯ ದಿಲ್ಲಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕನ್ಹಯ್ಯ ಕುಮಾರ್ ಪರ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್, ಪ್ರಧಾನಿಯ ಇತ್ತೀಚಿಗಿನ ಸಂದರ್ಶನಗಳಲ್ಲಿ ಅವರು ನೀಡುತ್ತಿರುವ ಹೇಳಿಕೆಗಳನ್ನು ಉಲ್ಲೇಖಿಸಿದರಲ್ಲದೆ “ದೇವರು ಕಳುಹಿಸಿದ ಈ ವ್ಯಕ್ತಿ” ಕೇವಲ 22 ಜನರಿಗೆ ಕೆಲಸ ಮಾಡುತ್ತಿರುವುದು, ಕೇವಲ 22 ಜನರಿಗೆ. ಪ್ರಧಾನಿ ಮೋದಿ ಎಲ್ಲವನ್ನೂ ಅಂಬಾನಿ ಮತ್ತು ಅದಾನಿ ಅವರ ಇಚ್ಛೆಗಳಂತೆ ಮಾಡುತ್ತಾರೆ. ದೇಶದ ಆಸ್ತಿ, ರೈಲ್ವೆ, ಬಂದರು, ವಿಮಾನ ನಿಲ್ದಾಣಗಳು ಅದಾನಿಗೆ ನೀಡುತ್ತಾರೆ. ಆದರೆ ಬಡ ಜನರು ಸಾಲ ಮನ್ನಾ, ರಸ್ತೆ, ಆಸ್ಪತ್ರೆ, ಶಿಕ್ಷಣ ಇತ್ಯಾದಿಗೆ ಕೇಳಿದಾಗ ಮೋದಿ ಏನನ್ನೂ ಮಾಡುವುದಿಲ್ಲ,” ಎಂದು ರಾಹುಲ್ ಹೇಳಿದರು.
“ಈ ಜನರು ಯಾವತ್ತೂ ಭಾರತದ ಸಂವಿಧಾನ ಅಥವಾ ಧ್ವಜನವನ್ನು ಒಪ್ಪಿಲ್ಲ. ಈ ಚುನಾವಣೆ ಭಾರತದ ಸಂವಿಧಾನವನ್ನು ರಕ್ಷಿಸಲು. ಅದು ಕೇವಲ ಒಂದು ಪುಸ್ತಕವಲ್ಲ, ಅದು ಸಾವಿರಾರು ವರ್ಷಗಳ ಸೈದ್ಧಾಂತಿಕ ಪರಂಪರೆಯನ್ನು ಹೊಂದಿದೆ,” ಎಂದು ರಾಹುಲ್ ಹೇಳಿದರು.