ಮಸಾಜ್ ಮಾಡುವ ಕಂಪೆನಿಗಳು ಸಮೀಕ್ಷೆ ನಡೆಸಿದರೆ ಇನ್ನೇನಾಗುತ್ತದೆ? : ಆಪ್ ಸಂಸದ ಸಂಜಯ್ ಸಿಂಗ್ ವ್ಯಂಗ್ಯ
ದಿಲ್ಲಿ ಮತದಾನೋತ್ತರ ಸಮೀಕ್ಷೆ
Photo: PTI
ಹೊಸದಿಲ್ಲಿ: ದಿಲ್ಲಿ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಮತದಾನೋತ್ತರ ಸಮೀಕ್ಷೆಯನ್ನು ಆಮ್ ಆದ್ಮಿ ಪಕ್ಷ (ಆಪ್)ದ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಗುರುವಾರ ತಿರಸ್ಕರಿಸಿದ್ದಾರೆ. ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಗೆಲ್ಲುತ್ತದೆ ಎಂಬುದಾಗಿ ಸಮೀಕ್ಷೆಗಳು ಹೇಳಿವೆ.
‘‘ಮಸಾಜ್ ಸೇವೆಗಳನ್ನು ನೀಡುವ ಮತ್ತು ಬ್ಯೂಟಿ ಪಾರ್ಲರ್ಗಳನ್ನು ನಡೆಸುವ ಕಂಪೆನಿಗಳು ಮತದಾನೋತ್ತರ ಸಮೀಕ್ಷೆಗಳನ್ನು ನಡೆಸಿದರೆ, ಅಂಥ ಸಮೀಕ್ಷೆಗಳ ಪರಿಸ್ಥಿತಿ ಏನು? ಫೆಬ್ರವರಿ 8ರವರೆಗೆ ಕಾದು ನೋಡಿ ಎನ್ನುವುದು ನನ್ನ ಏಕೈಕ ಕೋರಿಕೆ’’ ಎಂದು ಸಿಂಗ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
‘‘ಆಪ್ ಭಾರೀ ಬಹುಮತದೊಂದಿಗೆ ದಿಲ್ಲಿಯಲ್ಲಿ ಸರಕಾರ ರಚಿಸುತ್ತದೆ. ನಾವು ಎತ್ತಿದ ವಿಷಯಗಳಿಗೆ ಜನರು ಸಮ್ಮತಿ ವ್ಯಕ್ತಪಡಿಸಿದ್ದಾರೆ’’ ಎಂದು ಅವರು ಅಭಿಪ್ರಾಯಪಟ್ಟರು.
ದಿಲ್ಲಿಯಲ್ಲಿ ಆಡಳಿತಾರೂಢ ಆಪ್ ಸರಕಾರವನ್ನು ಹಿಂದಿಕ್ಕಿ ಬಿಜೆಪಿ ಗೆಲ್ಲುತ್ತದೆ ಮತ್ತು ಕಾಂಗ್ರೆಸ್ ಇನ್ನೊಂದು ಹೀನಾಯ ಸೋಲನ್ನು ಕಾಣುತ್ತದೆ ಎಂಬುದಾಗಿ ಹೆಚ್ಚಿನ ಸಮೀಕ್ಷೆಗಳು ಭವಿಷ್ಯ ಹೇಳಿವೆ.
ರಾಜ್ಯದಲ್ಲಿ ನಿಕಟ ಹೋರಾಟ ನಡೆಯಲಿದೆ ಎಂದು ಮ್ಯಾಟ್ರಿಝ್ನ ಸಮೀಕ್ಷೆ ತಿಳಿಸಿದೆ. ಅದರ ಪ್ರಕಾರ, ಬಿಜೆಪಿ 35-40 ಸ್ಥಾನಗಳನ್ನು ಗೆಲ್ಲಲಿದೆ ಮತ್ತು ಆಪ್ 32-37 ಸ್ಥಾನಗಳಲ್ಲಿ ವಿಜಯಿಯಾಗಲಿದೆ. ಕಾಂಗ್ರೆಸ್ ಸೊನ್ನೆಯಿಂದ ಒಂದು ಸ್ಥಾನ ಪಡೆಯಬಹುದು ಎಂದು ಸಮೀಕ್ಷೆ ಊಹಿಸಿದೆ.
ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್ ಮಾಡಿ
https://whatsapp.com/channel/0029VaA8ju86LwHn9OQpEq28