ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿರೀಕ್ಷಿತ ನಿರ್ವಹಣೆ ತೋರದೇ ಇದ್ದರೆ...: ಪ್ರಶಾಂತ್ ಕಿಶೋರ್ ಹೇಳಿದ್ದೇನು?
ಪ್ರಶಾಂತ್ ಕಿಶೋರ್ , ರಾಹುಲ್ ಗಾಂಧಿ | Photo: ANI
ಹೊಸದಿಲ್ಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ನಿರ್ವಹಣೆ ನಿರೀಕ್ಷೆಗೆ ತಕ್ಕಂತೆ ಇರದೇ ಇದ್ದರೆ ಪಕ್ಷದ ನಾಯಕ ಹಾಗೂ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬದಿಗೆ ಸರಿದು ವಿರಾಮ ತೆಗೆದುಕೊಳ್ಳಬೇಕು ಎಂಬ ಸಲಹೆಯನ್ನು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರು ನೀಡಿದ್ದಾರೆ.
ರಾಹುಲ್ ಗಾಂಧಿ ಕಳೆದ 10 ವರ್ಷಗಳಿಂದ ಕಾಂಗ್ರೆಸ್ ಪಕ್ಷವನ್ನು ಯಾವುದೇ ಯಶಸ್ಸು ದೊರೆಯದೆ ಮುನ್ನಡೆಸಿಕೊಂಡು ಬರುತ್ತಿದ್ದಾರೆ ಆದರೆ ಬದಿಗೆ ಸರಿದು ಬೇರೆಯವರಿಗೆ ಪಕ್ಷದ ನಾಯಕತ್ವವನ್ನು ನೀಡಲು ಮನಸ್ಸು ಮಾಡುತ್ತಿಲ್ಲ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
“ಒಬ್ಬರು ಕಳೆದ 10 ವರ್ಷಗಳಿಂದ ಅದೇ ಕೆಲಸವನ್ನು ಯಾವುದೇ ಯಶಸ್ಸು ದೊರೆಯದೆ ಮಾಡುತ್ತಿದ್ದರೆ, ವಿರಾಮ ತೆಗೆದುಕೊಳ್ಳುವುದರಿಂದ ಯಾವುದೇ ಸಮಸ್ಯೆಯಿಲ್ಲ, ಆ ಕೆಲಸವನ್ನು ಬೇರೆಯವರಿಗೆ ಐದು ವರ್ಷ ನಿರ್ವಹಿಸಲು ಅನುವು ಮಾಡಿಕೊಡಬೇಕು,” ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಪುನಶ್ಚೇತನ ಯೋಜನೆ ಸಿದ್ಧಪಡಿಸಿದ್ದ ಆದರೆ ಪಕ್ಷದ ನಾಯಕತ್ವದೊಂದಿಗೆ ಒಮ್ಮತ ಮೂಡದ ಕಾರಣ ಹಿಂದೆ ಸರಿದಿದ್ದ ಪ್ರಶಾಂತ್ ಕಿಶೋರ್ ಪ್ರಕಾರ ರಾಹುಲ್ ಗಾಂಧಿ ಅವರ ನಾಯಕತ್ವ ಶೈಲಿ “ಪ್ರಜಾಸತ್ತಾತ್ಮಕವಾಗಿಲ್ಲ. “ರಾಹುಲ್ ಗಾಂಧಿ ತಮಗೆ ಎಲ್ಲಾ ಗೊತ್ತಿದೆ ಎಂದು ಅಂದುಕೊಂಡಿದ್ದಾರೆ. ಸಹಾಯದ ಅಗತ್ಯ ನಿಮಗಿದೆ ಎಂದು ನೀವು ಒಪ್ಪಿಕೊಳ್ಳದೇ ಇದ್ದರೆ ಯಾರೂ ನಿಮಗೆ ಸಹಾಯ ಮಾಡಲಾರರು. ಅವರಿಗೆ ತಾವು ಸರಿ ಎಂದು ಅಂದುಕೊಂಡಿದ್ದನ್ನು ಕಾರ್ಯಗತಗೊಳಿಸಲು ಯಾರಾದರೂ ಬೇಕಿದೆ. ಅದು ಸಾಧ್ಯವಿಲ್ಲ,” ಎಂದು ಕಿಶೋರ್ ಹೇಳಿದರು.
2019 ಲೋಕಸಭಾ ಚುನಾವಣೆಯಲ್ಲಿ ಸೋಲಿನ ನಂತರ ಪಕ್ಷದ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿದಿದ್ದ ರಾಹುಲ್ ಬೇರೆಯವರಿಗೆ ಆ ಜವಾಬ್ದಾರಿ ನೀಡುವುದಾಗಿ ಹೇಳಿದ್ದರು. ಆದರೆ ನಿಜಾರ್ಥದಲ್ಲಿ ಅವರು ಹಾಗೆ ಮಾಡಿಲ್ಲ. ಪಕ್ಷದಲ್ಲಿ ಕೆಲವರ ಅನುಮತಿಯಿಲ್ಲದೆ ಯಾವುದೇ ನಿರ್ಧಾರ ಅಸಾಧ್ಯ ಎಂಬುದನ್ನು ಕೆಲ ಪಕ್ಷ ನಾಯಕರೇ ಖಾಸಗಿಯಾಗಿ ಒಪ್ಪಿಕೊಳ್ಳುತ್ತಾರೆ ಎಂಬುದನ್ನೂ ಕಿಶೋರ್ ಹೇಳಿದರು.