ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ಕೊಟ್ಟ ಶಿವಸೇನೆ ಶಾಸಕ ಸಂಜಯ್ ಗಾಯಕ್ವಾಡ್
ಸಂಜಯ್ ಗಾಯಕ್ವಾಡ್ (Photo: Facebook)
ಮಹಾರಾಷ್ಟ್ರ: ಶಿವಸೇನೆ ಶಾಸಕ ಸಂಜಯ್ ಗಾಯಕ್ವಾಡ್ ಮತ್ತೆ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದು, ʼಕಾಂಗ್ರೆಸ್ ನಾಯಿ ನನ್ನ ಕಾರ್ಯಕ್ರಮಕ್ಕೆ ಪ್ರವೇಶಿಸಲು ಪ್ರಯತ್ನಿಸಿದರೆ, ಅದನ್ನು ಸಮಾಧಿ ಮಾಡಲಾಗುವುದು ಎಂದು ಹೇಳಿದ್ದಾರೆ.
ಬುಲ್ಧಾನಾ ಕ್ಷೇತ್ರದ ಶಿವಸೇನಾ(ಶಿಂಧೆ ಬಣ) ಶಾಸಕರಾಗಿರುವ ಸಂಜಯ್ ಗಾಯಕ್ವಾಡ್ ಇತ್ತೀಚೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನಾಲಿಗೆ ಕತ್ತರಿಸುವವರಿಗೆ 11 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಈ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಇದರ ಬೆನ್ನಲ್ಲೇ ಗಾಯಕ್ವಾಡ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಸಂಜಯ್ ಗಾಯಕ್ವಾಡ್ ಹೇಳಿಕೆ ವಿವಾದಕ್ಕೆ ಗುರಿಯಾಗುತ್ತಿದ್ದಂತೆ ಅವರು ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು. ನಾನು ನೀಡಿದ ಹೇಳಿಕೆಗೆ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದರು.
ಗಾಯಕ್ವಾಡ್ ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದು ಇದು ಹೊಸದೇನಲ್ಲ. ಫೆಬ್ರವರಿ ತಿಂಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಒಂದನ್ನು ಮಾಡಿದ್ದ ಸಂಜಯ್ ಗಾಯಕ್ವಾಡ್, 1987ರಲ್ಲಿ ನಾನು ಹುಲಿಯೊಂದನ್ನು ಬೇಟೆಯಾಡಿದ್ದೆ ಹಾಗೂ ಹುಲಿಯ ಉಗುರನ್ನು ನನ್ನ ಕುತ್ತಿಗೆಯ ಸುತ್ತ ಧರಿಸಿದ್ದೇನೆ ಎಂದು ಹೇಳಿಕೊಂಡಿದ್ದರು. ಇದರ ಬೆನ್ನಿಗೇ, ಅವರ ವಿರುದ್ಧ ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.