ಈಡಿ ನಾಗರಿಕರ ಮೂಲಭೂತ ಹಕ್ಕುಗಳ ಬಗ್ಗೆಯೂ ಯೋಚಿಸಬೇಕು: ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್ (PTI)
ಹೊಸದಿಲ್ಲಿ: ಜಾರಿ ನಿರ್ದೇಶನಾಲಯ (ಈಡಿ) ಮೂಲಭೂತ ಹಕ್ಕುಗಳನ್ನು ಹೊಂದಿದ್ದರೆ, ಜನರ ಹಕ್ಕುಗಳ ಬಗ್ಗೆಯೂ ಯೋಚಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ನಾಗರಿಕ್ ಅಪೂರ್ಣಿ ನಿಗಮ್ (ಎನ್ಎಎನ್) ಹಗರಣ ಪ್ರಕರಣವನ್ನು ಛತ್ತೀಸ್ಗಢದಿಂದ ಹೊಸದಿಲ್ಲಿಗೆ ವರ್ಗಾಯಿಸುವಂತೆ ಕೋರಿದ್ದ ಈಡಿಯ ಮನವಿಗೆ ಸಮ್ಮತಿ ನೀಡಲು ನಿರಾಕರಿಸಿದೆ.
ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕಾ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು, ಸಂವಿಧಾನದ 32 ನೇ ವಿಧಿಯ ಅಡಿಯಲ್ಲಿ ಈ ರಿಟ್ ಅರ್ಜಿಯನ್ನು ಹೇಗೆ ಸಲ್ಲಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯಕ್ಕೆ ಪ್ರಶ್ನಿಸಿತು. ಸಂವಿಧಾನದ 32ನೇ ವಿಧಿಯು, ವ್ಯಕ್ತಿಯೋರ್ವನ ಮೂಲಭೂತ ಹಕ್ಕುಗಳ ಉಲ್ಲಂಘನೆಯಾದಲ್ಲಿ ಸುಪ್ರೀಂ ಕೋರ್ಟ್ ಸಂಪರ್ಕಿಸಲು ಅವಕಾಶ ನೀಡುತ್ತದೆ. ಪೀಠದ ಅವಲೋಕನವನ್ನು ಅನುಸರಿಸಿ, ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಮನವಿಯನ್ನು ಹಿಂಪಡೆಯಲು ಅನುಮತಿಯನ್ನು ಕೋರಿದರು ಮತ್ತು ಈಡಿ ಕೂಡ ಮೂಲಭೂತ ಹಕ್ಕುಗಳನ್ನು ಹೊಂದಿದೆ ಎಂದು ಹೇಳಿದರು.
ಈ ವೇಳೆ ʼಈಡಿ ಮೂಲಭೂತ ಹಕ್ಕುಗಳನ್ನು ಹೊಂದಿದ್ದರೆ, ಜನರ ಮೂಲಭೂತ ಹಕ್ಕುಗಳ ಬಗ್ಗೆಯೂ ಯೋಚಿಸಬೇಕುʼ ಎಂದು ಪೀಠವು ನಯವಾಗಿ ಹೇಳಿದ್ದು, ಮನವಿಯನ್ನು ಹಿಂಪಡೆಯಲು ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರಿಗೆ ಅನುಮತಿ ನೀಡಿತು.
ನಾಗರಿಕ್ ಅಪೂರ್ಣಿ ನಿಗಮ್ ಪ್ರಕರಣದಲ್ಲಿ ಮಾಜಿ ಐಎಎಸ್ ಅಧಿಕಾರಿ ಅನಿಲ್ ತುತೇಜಾ ನಿರೀಕ್ಷಣಾ ಜಾಮೀನನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಹೇಳಿತ್ತು.
ನಾಗರಿಕ್ ಅಪೂರ್ಣಿ ನಿಗಮ್ ಹಗರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದ ಕೆಲ ಆರೋಪಿಗಳಿಗೆ ನ್ಯಾಯಾಲಯದ ಪ್ರಕ್ರಿಯೆಯಲ್ಲಿ ಸಹಾಯ ಮಾಡುವಂತೆ ಛತ್ತೀಸ್ಗಢದಲ್ಲಿ ಸಾಂವಿಧಾನಿಕ ಹುದ್ದೆಯಲ್ಲಿರುವ
ಕೆಲವರು ಹೈಕೋರ್ಟ್ ನ್ಯಾಯಾಧೀಶರನ್ನು ಸಂಪರ್ಕಿಸಿದ್ದಾರೆ ಎಂದು ತನಿಖಾ ಸಂಸ್ಥೆ ಇತ್ತೀಚೆಗೆ ಹೇಳಿತ್ತು.
ಪಿಎಂಎಲ್ಎ ಪ್ರಕರಣವನ್ನು ಛತ್ತೀಸ್ಗಢದಿಂದ ದಿಲ್ಲಿಗೆ ವರ್ಗಾಯಿಸಬೇಕು ಮತ್ತು ಈ ಪ್ರಕರಣದಲ್ಲಿ ಕೆಲವು ಆರೋಪಿಗಳಿಗೆ ನೀಡಲಾದ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸಬೇಕು ಎಂದು ಈಡಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು.