ಪಂಜಾಬ್ ನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸುಧಾರಿಸದಿದ್ದರೆ ರಾಷ್ಟ್ರೀಯ ಹೆದ್ದಾರಿ ಯೋಜನೆ ರದ್ದು: ನಿತಿನ್ ಗಡ್ಕರಿ ಎಚ್ಚರಿಕೆ
ನಿತಿನ್ ಗಡ್ಕರಿ | PTI
ಹೊಸದಿಲ್ಲಿ: ಪಂಜಾಬ್ ರಾಜ್ಯದಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಸುಧಾರಿಸದಿದ್ದರೆ, ಇದರಿಂದ ತೀವ್ರವಾಗಿ ಬಾಧಿತಗೊಂಡಿರುವ ರೂ. 14,288 ಕೋಟಿ ಮೌಲ್ಯದ ಎಂಟು ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ರದ್ದು ಇಲ್ಲವೆ ವಜಾಗೊಳಿಸದೇ ಬೇರೆ ದಾರಿಗಳಿಲ್ಲ ಎಂದು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಪತ್ರ ಬರೆದು ಎಚ್ಚರಿಸಿದ್ದಾರೆ.
ದಿಲ್ಲಿ-ಅಮೃತಸರ-ಕತ್ರಾ ಎಕ್ಸ್ ಪ್ರೆಸ್ ವೇ ನಿರ್ಮಾಣ ಕಾಮಗಾರಿ ಪ್ರದೇಶದಲ್ಲಿ ಇಂಜಿನಿಯರ್ ಗಳು ಸೇರಿದಂತೆ ಗುತ್ತಿಗೆದಾರರ ಕಾರ್ಮಿಕರನ್ನು ಜಲಂಧರ್ ನಲ್ಲಿ ಥಳಿಸಿರುವ ದುಷ್ಕರ್ಮಿಗಳು, ಲುಧಿಯಾನಾದಲ್ಲಿರುವ ಯೋಜನಾ ಶಿಬಿರ ಹಾಗೂ ಸಿಬ್ಬಂದಿಗಳನ್ನು ಜೀವಂತವಾಗಿ ಸುಟ್ಟು ಹಾಕಲಾಗುವುದು ಎಂದು ಬೆದರಿಸಿದ ನಂತರ, ಕೇಂದ್ರ ಸಚಿವರಿಂದ ಈ ಎಚ್ಚರಿಕೆ ರವಾನೆಯಾಗಿದೆ.
ಈ ಯೋಜನೆಗಳು ಹಸಿರು ಪ್ರದೇಶದ ಕಾರಿಡಾರ್ ಗಳಾಗಿದ್ದು, ಈ ಪೈಕಿ ಒಂದು ಪ್ಯಾಕೇಜ್ ಅನ್ನು ರದ್ದುಗೊಳಿಸಿದರೂ, ಸಂಪೂರ್ಣ ಯೋಜನೆಯೇ ನಿಷ್ಪ್ರಯೋಜಕವಾಗಲಿದೆ ಎಂದು ಗಡ್ಕರಿ ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಅವರ ಕಾರ್ಮಿಕರು ಎದುರಿಸುತ್ತಿರುವ ಗಂಭೀರ ಸುರಕ್ಷತಾ ಬೆದರಿಕೆಗಳು ಹಾಗೂ ಭೂಸ್ವಾಧೀನ ಪ್ರಕ್ರಿಯೆಯಲ್ಲಿನ ವಿಳಂಬ ಕುರಿತು ಗಡ್ಕರಿ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಮಾನ್ ಅವರಿಗೆ ಬರೆದಿರುವ ಪತ್ರದಲ್ಲಿ ಕಾರ್ಮಿಕರ ಮೇಲೆ ನಡೆದಿರುವ ಹಲ್ಲೆಯ ಚಿತ್ರಗಳನ್ನು ಅವರು ಲಗತ್ತಿಸಿದ್ದಾರೆ.