ಚುನಾವಣೆ ನಂತರ ಮೋದಿ ಅವರನ್ನು ಈಡಿ ಪ್ರಶ್ನಿಸಿದರೆ ʼದೇವರು ಹೇಳಿದಂತೆ ಮಾಡಿದ್ದೇನೆʼ ಎನ್ನಬಹುದು: ರಾಹುಲ್ ಗಾಂಧಿ ವ್ಯಂಗ್ಯ
ರಾಹುಲ್ ಗಾಂಧಿ | PC : PTI
ಹೊಸದಿಲ್ಲಿ: “ದೇವರೇ ನನ್ನನ್ನು ಈ ಭೂಮಿಗೆ ಕಳುಹಿಸಿರಬಹುದು” ಎಂದು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಸಂದರ್ಶನಗಳಲ್ಲಿ ಹೇಳಿಕೊಂಡಿರುವ ಬಗ್ಗೆ ರಾಹುಲ್ ಗಾಂಧಿ ಬಿಹಾರದಲ್ಲಿ ನಡೆದ ರ್ಯಾಲಿಯೊಂದರಲ್ಲಿ ವ್ಯಂಗ್ಯವಾಡಿದ್ದಾರೆ.
ಜಾರಿ ನಿರ್ದೇಶನಾಲಯವು ಚುನಾವಣೆಯ ನಂತರ ಭ್ರಷ್ಟಾಚಾರ ಕುರಿತಂತೆ ಮೋದಿ ಅವರನ್ನು ಪ್ರಶ್ನಿಸಿದರೆ ಅವರು ತಾವು ದೇವರು ಹೇಳಿದಂತೆ ಮಾಡಿದ್ದೇನೆ ಎಂದು ಹೇಳಬಹುದು ಎಂದು ರಾಹುಲ್ ಹೇಳಿದ್ದಾರೆ.
“ಪ್ರಧಾನಿ ಈ ಪರಮಾತ್ಮ ಕಥೆಯನ್ನು ಏಕೆ ಹೇಳಿದ್ದಾರೆ ಗೊತ್ತೇ? ಚುನಾವಣೆ ನಂತರ ಈಡಿ ಅವರ ಬಳಿ ಅದಾನಿಯ ಬಗ್ಗೆ ಕೇಳಿದರೆ, ನನಗೆ ಗೊತ್ತಿಲ್ಲ, ಪರಮಾತ್ಮ ಹಾಗೆ ಮಾಡಲು ಹೇಳಿದ್ದಾರೆ ಎನ್ನಬಹುದು… ಮೋದೀ ಜಿ ಉದ್ದನೆಯ ಭಾಷಣಗಳನ್ನು ನೀಡಿ ದೇಶವನ್ನು ಒಡೆಯುವ ಕೆಲಸ ಮಾಡಬೇಡಿ. ನೀವು ಈ ದೇಶದ ಯುವಜನತೆಗೆ ಎಷ್ಟು ಉದ್ಯೋಗಗಳನ್ನು ನೀಡಿದ್ದೀರಿ ಎಂದು ಮೊದಲು ಬಿಹಾರದ, ಈ ದೇಶದ ಜನರಿಗೆ ಹೇಳಿ,” ಎಂದು ರಾಹುಲ್ ಹೇಳಿದರು.
ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದಾಗ ಅಗ್ನಿಪಥ ಯೋಜನೆ ವಾಪಸ್ ಪಡೆಯಲಾಗುವುದು ಎಂದು ಅವರು ಹೇಳಿದರು.