2024ರಲ್ಲಿ ಮೋದಿ ಗೆದ್ದಲ್ಲಿ, ಚುನಾವಣೆಯೇ ಇರದು : ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ | Photo: PTI
ಹೊಸದಿಲ್ಲಿ : ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಪ್ರಧಾನಿ ನರೇಂದ್ರ ಮೋದಿ ಅವರು ಸರ್ವಾಧಿಕಾರಕ್ಕೆ ಆದ್ಯತೆ ನೀಡಬಹುದು. ಆದುದರಿಂದ 2024ರ ಲೋಕಸಭಾ ಚುನಾವಣೆ ಪ್ರಜಾಪ್ರಭುತ್ವವನ್ನು ಉಳಿಸಲು ಜನರಿಗಿರುವ ಕೊನೆಯ ಅವಕಾಶ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೋಮವಾರ ಆತಂಕ ವ್ಯಕ್ತಪಡಿಸಿದ್ದಾರೆ.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ರಾಜ್ಯಗಳು ಹಾಗೂ ವಿರೋಧ ಪಕ್ಷಗಳ ನಾಯಕರಿಗೆ ಬೆದರಿಕೆಗಳನ್ನು ಹಾಕಿ ಆಡಳಿತ ನಡೆಸುತ್ತಿದೆ. ರಾಜಕೀಯ ವಿರೋಧಿಗಳನ್ನು ಮಣಿಸಲು ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆಯನ್ನು ಅಸ್ತ್ರವಾಗಿ ಬಳಸುತ್ತಿದೆ ಎಂದು ಅವರು ಆರೋಪಿಸಿದರು.
ಬಿಜೆಪಿ ಹಾಗೂ ಆರೆಸ್ಸೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಅವುಗಳ ಸಿದ್ಧಾಂತ ವಿಷವಿದ್ದಂತೆ. ಆದುದರಿಂದ ಅವುಗಳಿಂದ ದೂರವಿರುವಂತೆ ಅವರು ಜನರನ್ನು ಆಗ್ರಹಿಸಿದರು.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರವಿವಾರ ಕಾಂಗ್ರೆಸ್ ತ್ಯಜಿಸಿ ಎನ್ ಡಿ ಎ ಗೆ ಮರಳಿರುವ ಕುರಿತು ಪ್ರತಿಕ್ರಿಯಿಸಿದ ಖರ್ಗೆ, ಓರ್ವ ವ್ಯಕ್ತಿ ಮಹಾಘಟಬಂದನ್ ತೊರೆದರೆ, ಅದೇನು ದುರ್ಬಲ ಆಗುವುದಿಲ್ಲ. ನಾವು ಬಿಜೆಪಿಯನ್ನು ಸೋಲಿಸುತ್ತೇವೆ ಎಂದರು.
ನಿತೀಶ್ ಕುಮಾರ್ ಅವರು ಮಹಾಘಟಬಂದನ್ ತ್ಯಜಿಸಿ ಎನ್ ಡಿ ಎ ಸೇರಿರುವುದು ಪೂರ್ವ ಯೋಜಿತ ಎಂದು ಹೇಳಿದ ಖರ್ಗೆ, ನಿತೀಶ್ ಕುಮಾರ್ ಇಂಡಿಯಾ ಮೈತ್ರಿಕೂಟವನ್ನು ಕತ್ತಲಲ್ಲಿ ಇರಿಸಿದ್ದರು ಎಂದರು.
ಇಂತಹ ನಿರ್ಧಾರವನ್ನು ಇಷ್ಟು ತುರ್ತಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಇದು ಪೂರ್ವ ಯೋಜಿತ ಎಂಬುದನ್ನು ತೋರಿಸುತ್ತದೆ. ಇಂಡಿಯಾ ಮೈತ್ರಿಕೂಟವನ್ನು ಒಡೆಯಲು ಬಿಜೆಪಿ ಹಾಗೂ ಜೆಡಿಯು ಈ ಎಲ್ಲಾ ಯೋಜನೆಗಳನ್ನು ರೂಪಿಸಿದೆ. ಅವರು (ನಿತೀಶ್ ಕುಮಾರ್) ನಮ್ಮನ್ನು ಕತ್ತಲೆಯಲ್ಲಿ ಇರಿಸಿದ್ದರು. ಅವರು ಲಾಲು ಯಾದವ್ ಅವರನ್ನೂ ಕತ್ತಲೆಯಲ್ಲಿ ಇರಿಸಿದ್ದರು ಎಂದು ಖರ್ಗೆ ಹೇಳಿದರು.