ಸಕ್ಕರೆ ಪ್ರಮಾಣ ಕುಸಿದರೆ ಕೇಜ್ರಿವಾಲ್ ಮತ್ತೆಂದೂ ಎದ್ದೇಳಲಾರರು: ದಿಲ್ಲಿ ಹೈಕೋರ್ಟ್ ನಲ್ಲಿ ವಕೀಲರ ವಾದ

ಅರವಿಂದ ಕೇಜ್ರಿವಾಲ್ | PTI
ಹೊಸದಿಲ್ಲಿ: ತಿಹಾರ್ ಜೈಲಿನಲ್ಲಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರ ದೇಹದ ಸಕ್ಕರೆ ಪ್ರಮಾಣವು ಅವರು ನಿದ್ದೆಯಲ್ಲಿರುವಾಗ ಅಪಾಯಕಾರಿ ಮಟ್ಟಕ್ಕೆ ಕುಸಿಯುತ್ತದೆ ಎಂದು ಅವರ ವಕೀಲ ಅಭಿಶೇಕ್ ಮನು ಸಿಂಘ್ವಿ ಬುಧವಾರ ದಿಲ್ಲಿ ಹೈಕೋರ್ಟ್ ಗೆ ಹೇಳಿದ್ದಾರೆ. ದೇಹದಲ್ಲಿ ಸಕ್ಕರೆ ಪ್ರಮಾಣದ ದಿಢೀರ್ ಕುಸಿತದಿಂದ ರೋಗಿಯು ತನ್ನ ನಿದ್ರಾವಸ್ಥೆಯಿಂದ ಏಳದಿರುವ ಸಾಧ್ಯತೆ ಇದೆ ಎಂದು ಅವರು ವಾದಿಸಿದರು.
‘‘ಮಲಗುವಾಗ ಕೇಜ್ರಿವಾಲ್ ರ ರಕ್ತದಲ್ಲಿರುವ ಸಕ್ಕರೆ ಪ್ರಮಾಣವು 50ಕ್ಕೆ ಕುಸಿದಿದೆ. ಇದು ಕಳವಳಕ್ಕೆ ಕಾರಣವಾಗಿದೆ. ವ್ಯಕ್ತಿಯು ನಿದ್ರಿಸುತ್ತಿರುವಾಗ ಸಕ್ಕರೆ ಪ್ರಮಾಣವು ಕುಸಿಯುವುದು ಅಪಾಯಕಾರಿಯಾಗಿದೆ. ಇದು ಸಂಭವಿಸಿದರೆ, ಆ ವ್ಯಕ್ತಿಯು ಎದ್ದೇಳಲಾರ. ಈ ಬಗ್ಗೆ ಸಮಗ್ರ ಹಾಗೂ ಸಾಮಾನ್ಯ ತಿಳುವಳಿಕೆ ಆಧಾರದ ನಿಲುವೊಂದನ್ನು ತೆಗೆದುಕೊಳ್ಳಿ. ನ್ಯಾಯಾಲಯಗಳು ಕೇಜ್ರಿವಾಲ್ ಪರವಾಗಿ ಮೂರು ಆದೇಶಗಳನ್ನು ನೀಡಿವೆ’’ ಎಂದು ಮನು ಸಿಂಘ್ವಿ ಹೇಳಿದರು.
ದಿಲ್ಲಿ ಅಬಕಾರಿ ನೀತಿಗೆ ಸಂಬಂಧಿಸಿದ ಸಿಬಿಐ ಪ್ರಕರಣದಲ್ಲಿ ಜಾಮೀನು ಕೋರಿ ಕೇಜ್ರಿವಾಲ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯ ವೇಳೆ ಅವರು ಈ ವಾದ ಮಂಡಿಸಿದ್ದಾರೆ.
ಸಿಬಿಐ ಕಸ್ಟಡಿಯಲ್ಲಿರುವಾಗ ಕೇಜ್ರಿವಾಲ್ ರ ಸಕ್ಕರೆ ಮಟ್ಟವು ಐದು ಬಾರಿ 50ಕ್ಕಿಂತ ಕೆಳಗಿಳಿದಿದೆ ಎಂಬ ಅಂಶದತ್ತ ಅವರು ಬೆಟ್ಟು ಮಾಡಿದರು.
ದಿಲ್ಲಿ ಮುಖ್ಯಮಂತ್ರಿಯ ಜೈಲುವಾಸ ಮುಂದುವರಿಯುವುದನ್ನು ಖಾತರಿಪಡಿಸುವುದಕ್ಕಾಗಿ ಸಿಬಿಐ ಅವರನ್ನು ಬಂಧಿಸಿದೆ ಎಂದು ಸಿಂಘ್ವಿ ಬಣ್ಣಿಸಿದರು.
ಅವರನ್ನು ಬಂಧಿಸಲು ಸಿಬಿಐಗೆ ಯಾವುದೇ ಕಾರಣಗಳು ಇರಲಿಲ್ಲ ಎಂದು ಅವರು ಹೇಳಿದರು. ದಿಲ್ಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯವು ಅವರಿಗೆ ಜಾಮೀನು ನೀಡಿದ ಬಳಿಕ ಸಿಬಿಐಯು ಅವರನ್ನು ಬಂಧಿಸಿದೆ ಎಂದು ಅವರು ವಾದಿಸಿದರು.
‘‘ಅವರಿಗೆ ಏನು ಬೇಕೋ ಅದನ್ನು ಹೇಳುವವರೆಗೆ ಅವರು ಕೇಜ್ರಿವಾಲ್ರನ್ನು ಜೈಲಿನಲ್ಲಿಡಬಹುದೇ? ‘ನಾನು ಅಮಾಯಕ ಮತ್ತು ನಾನು ಏನೂ ಮಾಡಿಲ್ಲ’ ಎಂದು ಕೇಜ್ರಿವಾಲ್ ಹೇಳಿದರೆ, ಅದು ಹಾರಿಕೆಯ ಉತ್ತರವಾಗುತ್ತದೆ. ಕೇಜ್ರಿವಾಲ್ ಏನು ಹೇಳಿದರೂ ಹಾರಿಕೆಯ ಉತ್ತರವಾಗುತ್ತದೆ. ಕೇಜ್ರಿವಾಲ್ ಹೇಳುತ್ತಿರುವುದು ಸತ್ಯ, ಆದರೆ, ಅದು ತನಿಖಾಧಿಕಾರಿಗಳು ಬಯಸುವ ಉತ್ತರವಲ್ಲ. ಇಲ್ಲಿ ಕೂಡ, ಸತ್ಯ ಏನು ಎನ್ನುವುದನ್ನು ನ್ಯಾಯಾಲಯ ನಿರ್ಧರಿಸಬೇಕು’’ ಎಂದರು.
ದಿಲ್ಲಿ ಹೈಕೋರ್ಟ್ ತನ್ನ ತೀರ್ಪನ್ನು ಕಾದಿರಿಸಿದೆ.