ರೈತರ ಮೇಲೆ ದಾಳಿ ನಡೆದರೆ ದೇಶ ಪ್ರಗತಿ ಹೊಂದಲು ಹೇಗೆ ಸಾಧ್ಯ?: ಮಮತಾ ಬ್ಯಾನರ್ಜಿ ವಾಗ್ದಾಳಿ
ಮಮತಾ ಬ್ಯಾನರ್ಜಿ | Photo: NDTV
ಕೋಲ್ಕತಾ: ರಾಷ್ಟ್ರ ರಾಜಧಾನಿ ದಿಲ್ಲಿಗೆ ರೈತರು ಮೆರವಣಿಗೆ ನಡೆಸಲು ಪ್ರಯತ್ನಿಸಿದಾಗ, ಪಂಜಾಬ್ ಮತ್ತು ಹರ್ಯಾಣ ನಡುವಿನ ಶಂಭು ಗಡಿಯ ಬಳಿ ಪೊಲೀಸರು ರೈತರ ಮೇಲೆ ಅಶ್ರುವಾಯು ಪ್ರಯೋಗಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮ್ಮ ಮೂಲಭೂತ ಹಕ್ಕಿಗಾಗಿ ಪ್ರತಿಭಟನೆ ನಡೆಸುತ್ತಿರುವ ರೈತರ ಮೇಲೆ ದಾಳಿ ನಡೆಸಿದರೆ ದೇಶ ಹೇಗೆ ಪ್ರಗತಿ ಹೊಂದಲು ಸಾಧ್ಯ? ಎಂದು ಕಿಡಿ ಕಾರಿದ್ದಾರೆ ಎಂದು ndtv.com ವರದಿ ಮಾಡಿದೆ.
"ತಮ್ಮ ಮೂಲಭೂತ ಹಕ್ಕಿಗಾಗಿ ಪ್ರತಿಭಟಿಸುತ್ತಿರುವ ರೈತರ ಮೇಲೆ ಅಶ್ರುವಾಯು ಶೆಲ್ ದಾಳಿ ನಡೆಸಿದರೆ ದೇಶ ಹೇಗೆ ಪ್ರಗತಿ ಹೊಂದಲು ಸಾಧ್ಯ? ನಮ್ಮ ರೈತರ ಮೇಲೆ ಬಿಜೆಪಿ ನಡೆಸುತ್ತಿರುವ ಅಮಾನುಷ ದಾಳಿಯನ್ನು ಬಲವಾಗಿ ಖಂಡಿಸುತ್ತೇನೆ" ಎಂದು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಮಮತಾ ಬ್ಯಾನರ್ಜಿ ಬರೆದುಕೊಂಡಿದ್ದಾರೆ.
ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿರುವ ತೃಣಮೂಲ ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ರೈತರು ಹಾಗೂ ಕಾರ್ಮಿಕರಿಗೆ ನೆರವು ಒದಗಿಸುವಲ್ಲಿನ ಬಿಜೆಪಿಯ ವೈಫಲ್ಯವು ವಿಕಸಿತ ಭಾರತದ ಭ್ರಮೆಯನ್ನು ಬಯಲಾಗಿಸಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
"ರೈತರು ಹಾಗೂ ಕಾರ್ಮಿಕರಿಗೆ ನೆರವು ನೀಡುವಲ್ಲಿನ ಕೇಂದ್ರ ಸರಕಾರದ ವೈಫಲ್ಯವು ಪ್ರಚಾರ ತಂತ್ರದೊಂದಿಗೆ ಸೇರಿಕೊಂಡಿದ್ದು, ವಿಕಸಿತ ಭಾರತದ ಭ್ರಮೆಯನ್ನು ಬಯಲು ಮಾಡಿದೆ. ರೈತರ ಪ್ರತಿಭಟನೆಯನ್ನು ಹತ್ತಿಕ್ಕುವ ಬದಲು ತಮ್ಮ ಏರಿರುವ ಅಹಂ, ಅಧಿಕಾರ ದಾಹದ ಮಹತ್ವಾಕಾಂಕ್ಷೆಗಳು ಹಾಗೂ ದೇಶಕ್ಕೆ ಹಾನಿಯೆಸಗಿರುವ ತಮ್ಮ ಅಸಮರ್ಪಕ ಆಡಳಿತವನ್ನು ತಣಿಸಿಕೊಳ್ಳುವತ್ತ ಬಿಜೆಪಿ ಗಮನ ಕೇಂದ್ರೀಕರಿಸಬೇಕಿದೆ" ಎಂದು ಅವರು ಕಿವಿಮಾತು ಹೇಳಿದ್ದಾರೆ.
ರೈತರ ಹೋರಾಟಕ್ಕೆ ತಮ್ಮ ದೃಢ ಬೆಂಬಲ ವ್ಯಕ್ತಪಡಿಸಿರುವ ಮಮತಾ ಬ್ಯಾನರ್ಜಿ, ರೈತರು ಎಂತಹ ಏರುಪೇರನ್ನೂ ಸಹಿಸಬಲ್ಲರು ಎಂದು ಎಚ್ಚರಿಸಿದ್ದಾರೆ.