‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಶೇ. 50 ಮೀಸಲಾತಿ ಮಿತಿ ರದ್ದು: ರಾಹುಲ್ ಗಾಂಧಿ
ರಾಹುಲ್ ಗಾಂಧಿ | PC : PTI
ಪುಣೆ: ‘ಇಂಡಿಯಾ’ ಮೈತ್ರಿಕೂಟ ಸರಕಾರ ಅಧಿಕಾರಕ್ಕೆ ಬಂದರೆ ಶೇ. 50 ಮೀಸಲಾತಿ ಮಿತಿಯನ್ನು ರದ್ದುಗೊಳಿಸಲಾಗುವುದು ಹಾಗೂ ಮರಾಠಾ, ಧಂಗರ್ ಹಾಗೂ ಇತರರಿಗೆ ಮೀಸಲಾತಿಯನ್ನು ಖಾತರಿಗೊಳಿಸಲಾಗುವುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಹೇಳಿದ್ದಾರೆ.
ಲೋಕಸಭಾ ಅಭ್ಯರ್ಥಿ ರವೀಂದ್ರ ಧಂಕರ್ ಅವರನ್ನು ಬೆಂಬಲಿಸಿ ಪುಣೆಯಲ್ಲಿ ನಡೆದ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಅವರು ಮಾತನಾಡಿದರು. ಜಾತಿ ಗಣತಿ, ಆರ್ಥಿಕ ಸಮೀಕ್ಷೆ ಹಾಗೂ ಸಂಸ್ಥೆಗಳ ಸಮೀಕ್ಷೆಯನ್ನು ನಡೆಸಲಾಗುವುದು ಎಂದು ನಮ್ಮ ಚುನಾವಣಾ ಪ್ರಣಾಳಿಕೆ ಸ್ಪಷ್ಟವಾಗಿ ಹೇಳಿದೆ ಎಂದು ರಾಹುಲ್ ಗಾಂಧಿ ತಿಳಿಸಿದರು.
‘‘ಮಾಧ್ಯಮ, ಕಾರ್ಪೊರೇಟ್ ಜಗತ್ತು, ಖಾಸಗಿ ಆಸ್ಪತ್ರೆ, ಕಾಲೇಜು ಹಾಗೂ ವಿಶ್ವವಿದ್ಯಾನಿಲಯಗಳಲ್ಲಿ ಎಷ್ಟು ಮಂದಿ ಹಿಂದುಳಿದ ವರ್ಗದವರು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರು ಇದ್ದಾರೆ ಎಂದು ನಾವು ಪತ್ತೆ ಹಚ್ಚಲಿದ್ದೇವೆ. ನಮ್ಮ ಸರ್ವೇಯ ಮೂಲಕ ತಾವೆಷ್ಟು ಮಂದಿ ಈ ವ್ಯವಸ್ಥೆಯಲ್ಲಿ ಇದ್ದೇವೆ ಹಾಗೂ ನಮ್ಮ ನಿಜವಾದ ಪಾಲುದಾರಿಕೆಯ ಕುರಿತು ತಿಳಿಯಲಿದ್ದಾರೆ. ನಮ್ಮ ಸಮೀಕ್ಷೆ ಕ್ರಾಂತಿಕಾರಿ ಹೆಜ್ಜೆ. ಜಾತಿ ಗಣತಿ ನಡೆದ ದಿನ ದೇಶದ ವಾಸ್ತವತೆಯನ್ನು ಭಾರತದ ಜನರು ತಿಳಿದುಕೊಳ್ಳಲಿದ್ದಾರೆ’’ ಎಂದು ಅವರು ಹೇಳಿದ್ದಾರೆ.
ಶೇ. 50 ಮೀಸಲಾತಿ ಮಿತಿಯನ್ನು ರದ್ದುಗೊಳಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭರವಸೆ ನೀಡಬೇಕು. ಆದರೆ, ಅವರು ಎಂದಿಗೂ ಅದರ ಕುರಿತು ಮಾತನಾಡುವುದಿಲ್ಲ. ಸಂವಿಧಾನವನ್ನು ನಾಶ ಮಾಡಲು ಹಾಗೂ ಮೀಸಲಾತಿಯನು ರದ್ದುಗೊಳಿಸಲು ಬಿಜೆಪಿ ಬದ್ಧವಾಗಿದೆ. ಆದರೆ, ‘ಇಂಡಿಯಾ’ ಮೈತ್ರಿಕೂಟ ಇದನ್ನು ವಿರೋಧಿಸುತ್ತದೆ ಎಂದು ಅವರು ಹೇಳಿದರು.
‘‘ಚುನಾವಣಾ ಬಾಂಡ್ಗಳಲ್ಲಿ ಬಿಜೆಪಿ ಕೋಟಿಗಟ್ಟಲೆ ಹಣ ಗಳಿಸಿದೆ. ಆದರೆ, ಮಾಧ್ಯಮಗಳು ಮೌನವಾಗಿವೆ. ಚುನಾವಣಾ ಬಾಂಡ್ಗಳ ಮೂಲಕ ರಾಜಕೀಯ ದೇಣಿಗೆ ವ್ಯವಸ್ಥೆಯನ್ನು ರದ್ದುಗೊಳಿಸಲು ಬಯಸುವುದಾಗಿ ಮೋದಿ ಅವರು ಹೇಳಿದ್ದಾರೆ. ಆದರೆ, ಬಿಜೆಪಿ ತನ್ನ ದೇಣಿಗೆದಾರರನ್ನು ಬಹಿರಂಗಪಡಿಸಲು ನಿರಾಕರಿಸಿದೆ. ಯಾಕೆ?’’ ಎಂದು ಅವರು ಪ್ರಶ್ನಿಸಿದ್ದಾರೆ.