ಬಿಜೆಪಿಯಂತೆ ಹಣ ಖರ್ಚು ಮಾಡಿದ್ದರೆ ಚುನಾವಣೆಯಲ್ಲಿ ಗೆಲುವು ಸಾಧಿಸಿರುತ್ತಿದ್ದೆವು : ಗೋವಾ ಆಪ್ ಮುಖ್ಯಸ್ಥ
ಗೋವಾ ವಿಧಾನಸಭಾ ಚುನಾವಣೆಯಲ್ಲಿ ಕಿಕ್ ಬ್ಯಾಕ್ ಹಣ ಬಳಕೆ ಮಾಡಲಾಗಿದೆ ಎಂಬ ಈಡಿ ಆರೋಪಕ್ಕೆ ತಿರುಗೇಟು
ಅರವಿಂದ್ ಕೇಜ್ರಿವಾಲ್ , ಅಮಿತ್ ಪಾಲೇಕರ್ |Facebook/ Amit Palekar
ಪಣಜಿ: 2022ರ ಗೋವಾ ವಿಧಾನಸಭಾ ಚುನಾವಣಾ ಪ್ರಚಾರ ನಡೆಸಲು ದಿಲ್ಲಿ ಅಬಕಾರಿ ನೀತಿಯಿಂದ ಪಡೆಯಲಾದ ಕಿಕ್ ಬ್ಯಾಕ್ ಹಣವನ್ನು ಆಮ್ ಆದ್ಮಿ ಪಕ್ಷವು ಬಳಸಿತ್ತು ಎಂಬ ಜಾರಿ ನಿರ್ದೇಶನಾಲಯದ ಆರೋಪಕ್ಕೆ ತಿರುಗೇಟು ನೀಡಿರುವ ಗೋವಾ ಆಪ್ ಮುಖ್ಯಸ್ಥ, ಈ ಆರೋಪ ನಿಜವೇ ಆಗಿದ್ದರೆ, ನಾವು ಚುನಾವಣೆಯಲ್ಲಿ ಗೆಲುವು ಸಾಧಿಸಿರುತ್ತಿದ್ದೆವು ಎಂದು ವ್ಯಂಗ್ಯವಾಡಿದ್ದಾರೆ.
ದಿಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ರನ್ನು ಬಂಧಿಸಿದ ಮರು ದಿನ ಜಾರಿ ನಿರ್ದೇಶನಾಲಯ ಈ ಆರೋಪ ಮಾಡಿದೆ. ಗೋವಾ ಚುನಾವಣಾ ಪ್ರಚಾರಕ್ಕಾಗಿ ರೂ. 45 ಕೋಟಿ ಹಣವನ್ನು ಬಳಸಲಾಗಿದೆ ಎಂದು ಅದು ಆರೋಪಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಗೋವಾ ಆಪ್ ಮುಖ್ಯಸ್ಥ ಅಮಿತ್ ಪಾಲೇಕರ್, "ಚುನಾವಣೆಗಾಗಿ ಯಾವುದೇ ಅಭ್ಯರ್ಥಿಯೂ ಹಣ ಸ್ವೀಕರಿಸಿಲ್ಲ. ಏನೆಲ್ಲ ಖರ್ಚು ಮಾಡಲಾಗಿದೆ ಅದೆಲ್ಲವನ್ನೂ ನಮ್ಮ ಜೇಬಿನಿಂದ ಖರ್ಚು ಮಾಡಲಾಗಿದೆ ಹಾಗೂ ಅದರ ಲೆಕ್ಕವನ್ನು ಇಡಲಾಗಿದೆ" ಎಂದು ಹೇಳಿದ್ದಾರೆ. ನಮ್ಮ ಪಾಲಿನ ಒಂದೇ ಹಿನ್ನಡೆಯೆಂದರೆ ನಮ್ಮ ಬಳಿ ಸಾಕಷ್ಟು ಹಣವಿರಲಿಲ್ಲ. ಹೀಗಿದ್ದೂ ನಾವು ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದೆವು. ನಾವು ಬಿಜೆಪಿಯಂತೆ ಹಣ ಖರ್ಚು ಮಾಡಿದ್ದಿದ್ದರೆ, ನಾವು ಚುನಾವಣೆಯಲ್ಲಿ ಗೆಲುವು ಸಾಧಿಸಿರುತ್ತಿದ್ದೆವು" ಎಂದೂ ಅವರು ಪ್ರತಿಪಾದಿಸಿದ್ದಾರೆ.