ಜ್ಞಾನವಾಪಿಯನ್ನು ಮಸೀದಿ ಎಂದು ಉಲ್ಲೇಖಿಸುವುದು ವಿವಾದಕ್ಕೆ ಕಾರಣವಾಗುತ್ತದೆ ಎಂದ ಆದಿತ್ಯನಾಥ್
ಉತ್ತರ ಪ್ರದೇಶ ಮುಖ್ಯಮಂತ್ರಿ ಹೇಳಿಕೆಗೆ ಅಸದುದ್ದೀನ್ ಉವೈಸಿ ಹೇಳಿದ್ದೇನು?
ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ (PTI)
ಉತ್ತರ ಪ್ರದೇಶ: ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರು ವಾರಣಾಸಿಯ ಜ್ಞಾನವಾಪಿ ಮಸೀದಿಯ ಸುತ್ತಲಿನ ವಿವಾದದ ಕುರಿತು ಮಾತನಾಡಿದ್ದು, ಜ್ಞಾನವಾಪಿಯನ್ನು ಮಸೀದಿ ಎಂದು ಉಲ್ಲೇಖಿಸುವುದು ವಿವಾದಕ್ಕೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.
ಮೊದಲು ಹಿಂದೂ ದೇವಾಲಯವಾಗಿದ್ದ ಕಟ್ಟಡದ ಮೇಲೆ ಮೊಘಲರು ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಹಿಂದೂಗಳು ನಂಬುತ್ತಾರೆ, ಕಟ್ಟಡದ ಆವರಣದ ಒಳಗೆ ಮತ್ತು ಅದರ ಗೋಡೆಗಳ ಮೇಲೆ ಕಂಡುಬರುವ ವಿವಿಧ ಹಿಂದೂ ಚಿಹ್ನೆಗಳಿಂದ ಇದು ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.
ಮಸೀದಿಯ ಆವರಣದಲ್ಲಿ ತ್ರಿಶೂಲ ಏಕಿದೆ ಎಂದು ಪ್ರಶ್ನಿಸಿದ ಆದಿತ್ಯನಾಥ್, ಜ್ಯೋತಿರ್ಲಿಂಗ ಮತ್ತು ದೇವತೆಗಳ ಉಪಸ್ಥಿತಿಯನ್ನು ಒತ್ತಿ ಹೇಳಿದ್ದಾರೆ.
ವಾರಣಾಸಿ ಜಿಲ್ಲಾ ನ್ಯಾಯಾಲಯವು ಇತ್ತೀಚೆಗೆ ಜ್ಞಾನವಾಪಿ ಮಸೀದಿಯ ಮೂಲವನ್ನು ನಿರ್ಧರಿಸಲು ಸಮೀಕ್ಷೆಯನ್ನು ನಡೆಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್ಐ) ಆದೇಶಿಸಿದರೆ, ಮಸೀದಿ ಪರ ಅರ್ಜಿದಾರರು ಈ ನಿರ್ಧಾರವನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ಸರ್ವೇ ಕಾರ್ಯವನ್ನು ತಾತ್ಕಲಿಕವಾಗಿ ತಡೆದ ಸುಪ್ರೀಂ ಕೋರ್ಟ್ ವಿಷಯದ ಬಗ್ಗೆ ಅಲಹಾಬಾದ್ ಹೈಕೋರ್ಟ್ ಅನ್ನು ಸಂಪರ್ಕಿಸಲು ಸೂಚಿಸಿದೆ.
ಈ ನಡುವೆ, ಮುಖ್ಯಮಂತ್ರಿ ಆದಿತ್ಯನಾಥ್ ಮುಸ್ಲಿಂ ಸಮುದಾಯಕ್ಕೆ ʼಐತಿಹಾಸಿಕ ತಪ್ಪನ್ನುʼ ಸರಿಪಡಿಸುವ ಕರೆ ನೀಡಿದ್ದಾರೆ.
“ಮಸೀದಿ ಆವರಣದಲ್ಲಿ ತ್ರಿಶೂಲ ಏಕಿತ್ತು?. ಮಸೀದಿ ಎಂದು ಕರೆದರೆ ತಕರಾರು... ಮಸೀದಿಯಲ್ಲಿ ತ್ರಿಶೂಲ ಏನು ಮಾಡುತ್ತಿದೆ, ನಾವು ಇಟ್ಟುಕೊಂಡಿಲ್ಲ, ಅಲ್ಲಿ ಜ್ಯೋತಿರ್ಲಿಂಗವಿದೆ, ದೇವಾನುದೇವತೆಗಳಿವೆ. 'ಐತಿಹಾಸಿಕ ತಪ್ಪು' ನಡೆದಿದೆ ಎಂಬ ಪ್ರಸ್ತಾವನೆ ಮುಸ್ಲಿಂ ಸಮುದಾಯದಿಂದ ಬರಬೇಕು ಮತ್ತು ಅದನ್ನು ಸರಿಪಡಿಸಬೇಕು” ಎಂದು ಆದಿತ್ಯನಾಥ್ ಎಎನ್ಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಆದಿತ್ಯನಾಥ್ ಹೇಳಿಕೆಗೆ ಎಐಎಂಐಎಂ ಸಂಸದ ಅಸದುದ್ದೀನ್ ಉವೈಸಿ ಟೀಕಿಸಿದ್ದು, ಆದಿತ್ಯನಾಥ್ ಅವರ ಹೇಳಿಕೆಯನ್ನು 'ನ್ಯಾಯಾಂಗದ ಮೇಲಿನ ಅತಿಕ್ರಮಣ' ಎಂದು ಕರೆದಿದ್ದಾರೆ.
“ಅಲಹಾಬಾದ್ ಹೈಕೋರ್ಟ್ನಲ್ಲಿ ಎಎಸ್ಐ ಸಮೀಕ್ಷೆಯನ್ನು ಮುಸ್ಲಿಂ ಕಡೆಯವರು ವಿರೋಧಿಸಿದ್ದಾರೆ ಮತ್ತು ಕೆಲವೇ ದಿನಗಳಲ್ಲಿ ತೀರ್ಪು ನೀಡಲಾಗುವುದು ಎಂದು ಆದಿತ್ಯನಾಥ್ರಿಗೆ ಗೊತ್ತಿದೆ, ಆದರೂ ಅವರು ಇಂತಹ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ, ಇದು ನ್ಯಾಯಾಂಗದ ಅತಿಕ್ರಮಣವಾಗಿದೆ," ಎಂದು ಉವೈಸಿ ಹೇಳಿದ್ದಾರೆ.