ದೇವರಲ್ಲಿ ನಿಮಗೆ ನಂಬಿಕೆಯಿದ್ದರೆ ನಿಮ್ಮ ಮನೆಯಲ್ಲಿಯೇ ಧ್ಯಾನ ಮಾಡಿ : ಪ್ರಧಾನಿ ಮೋದಿಗೆ ಖರ್ಗೆ ಕಿವಿಮಾತು
ನರೇಂದ್ರ ಮೋದಿ , ಮಲ್ಲಿಕಾರ್ಜುನ ಖರ್ಗೆ | PC : PTI
ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿಯವರು ಕನ್ಯಾಕುಮಾರಿಯ ವಿವೇಕಾನಂದ ಶಿಲಾ ಸ್ಮಾರಕದಲ್ಲಿ 45 ಗಂಟೆಗಳ ಧ್ಯಾನದಲ್ಲಿ ತೊಡಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, ರಾಜಕೀಯ ಮತ್ತು ಧರ್ಮವನ್ನು ಎಂದಿಗೂ ಒಟ್ಟಿಗೆ ಸೇರಿಸಬಾರದು. ಇವೆರಡನ್ನೂ ಪ್ರತ್ಯೇಕವಾಗಿರಿಸಬೇಕು. ನಿಮಗೆ ದೇವರಲ್ಲಿ ನಂಬಿಕೆಯಿದ್ದರೆ ಅದನ್ನು ನಿಮ್ಮ ಮನೆಯಲ್ಲಿ ಮಾಡಿ ಎಂದು ಶುಕ್ರವಾರ ಕಿವಿಮಾತು ಹೇಳಿದರು.
ಒಂದು ಧರ್ಮದ ವ್ಯಕ್ತಿ ನಿಮ್ಮೊಂದಿಗಿರಬಹುದು. ಇನ್ನೊಂದು ಧರ್ಮದ ವ್ಯಕ್ತಿ ನಿಮಗೆ ವಿರುದ್ಧವಾಗಿರಬಹುದು. ಧಾರ್ಮಿಕ ಭಾವನೆಗಳನ್ನು ಚುನಾವಣೆಗಳೊಂದಿಗೆ ತಳುಕು ಹಾಕುವುದು ತಪ್ಪು. ಮೋದಿ ಕನ್ಯಾಕುಮಾರಿಗೆ ಹೋಗಿ ಅಲ್ಲಿ ನಾಟಕ ಮಾಡುತ್ತಿದ್ದಾರೆ. ಅಷ್ಟೊಂದು ಪೋಲಿಸ್ ಅಧಿಕಾರಿಗಳನ್ನು ನಿಯೋಜಿಸಿ ದೇಶದ ಎಷ್ಟೊಂದು ಹಣವನ್ನು ಪೋಲು ಮಾಡಲಾಗುತ್ತಿದೆ? ನೀವು ಅಲ್ಲಿಗೆ ಹೋಗಿ ತೋರಿಕೆಯ ಪ್ರದರ್ಶನ ಮಾಡುತ್ತಿರುವುದರಿಂದ ದೇಶಕ್ಕೆ ಹಾನಿಯೇ ಆಗಲಿದೆ. ನಿಮಗೆ ದೇವರಲ್ಲಿ ನಂಬಿಕೆಯಿದ್ದರೆ ಅದನ್ನು ಮನೆಯಲ್ಲಿಯೇ ಮಾಡಿ ಎಂದು ಖರ್ಗೆ ಹೇಳಿದರು.
ಅವರು (ಮೋದಿ) ಏನೇ ಹೇಳಲಿ, ಅವರ ನಾಯಕತ್ವವನ್ನು ಒಪ್ಪುವುದಿಲ್ಲ ಎಂದು ದೇಶದ ಜನರು ನಿರ್ಧರಿಸಿಬಿಟ್ಟಿದ್ದಾರೆ. ಹಣದುಬ್ಬರ ಮತ್ತು ನಿರುದ್ಯೋಗ ಈ ಚುನಾವಣೆಗಳಲ್ಲಿ ಕೆಲಸ ಮಾಡಿವೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿಷಯಗಳು ಜನರ ಮನಸ್ಸಿನಲ್ಲಿವೆ ಎಂದು ಹೇಳಿದರು.
1982ರಲ್ಲಿ ‘ಗಾಂಧಿ’ಚಲನಚಿತ್ರ ಬರುವವರೆಗೆ ಜಗತ್ತಿಗೆ ಮಹಾತ್ಮಾ ಗಾಂಧೀಜಿಯವರ ಬಗ್ಗೆ ತಿಳಿದಿರಲಿಲ್ಲ ಎಂಬ ಮೋದಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಖರ್ಗೆ, ‘ಗುಜರಾತಿನ ವ್ಯಕ್ತಿಗೆ ಮಹಾತ್ಮಾ ಗಾಂಧಿಯವರ ಬಗ್ಗೆ ತಿಳಿದಿಲ್ಲ ಎಂದರೆ ನಾವೇನು ಹೇಳಲು ಸಾಧ್ಯ? ನಾವು ರಾಷ್ಟ್ರಪಿತ ಎಂದು ಪರಿಗಣಿಸಿರುವ ವ್ಯಕ್ತಿಗೆ ನೀವೇಕೆ ಪ್ರಚಾರ ನೀಡುತ್ತಿಲ್ಲ. ಅವರೂ ಗುಜರಾತಿಯಾಗಿದ್ದರು. ನಮಗೆ ಅವರ ಬಗ್ಗೆ ಗೌರವವಿದೆ. ಆದರೆ ನೀವು ಗೋಡ್ಸೆಯನ್ನು ಆಯ್ಕೆ ಮಾಡಿಕೊಂಡಿದ್ದೀರಿ’ ಎಂದು ಕುಟುಕಿದರು.