ಐಐಟಿ ಮುಂಬೈ ವಿದ್ಯಾರ್ಥಿಗೆ ವಾರ್ಷಿಕ 3.7 ಕೋಟಿಯ ಆಫರ್!
ಮುಂಬೈ: ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಾಂಬೆಯ ವಾರ್ಷಿಕ ನೇಮಕಾತಿ ಪ್ರಕ್ರಿಯೆ ಮುಕ್ತಾಯವಾಗಿದ್ದು, ವಿದ್ಯಾರ್ಥಿಗಳು ವಿದೇಶಿ ಸೇವೆಗೆ ವಾರ್ಷಿಕ 3.7 ಕೋಟಿ ಹಾಗೂ ದೇಶೀಯ ಸೇವೆಗೆ 1.7 ಕೋಟಿ ರೂಪಾಯಿಗಳ ಆಫರ್ ಪಡೆದಿದ್ದಾರೆ. ಕಳೆದ ವರ್ಷ ವಾರ್ಷಿಕ ಅಂತರರಾಷ್ಟ್ರೀಯ ವೇತನ 2.1 ಕೋಟಿ ಹಾಗೂ ದೇಶೀಯ ವೇತನ 1.8 ಕೋಟಿ ರೂಪಾಯಿ ಆಗಿತ್ತು.
ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಗರಿಷ್ಠ ನೇಮಕಾತಿ ಆಗಿದೆ ಹಾಗೂ ವಾರ್ಷಿಕ ವೇತನ ಕಳೆದ ವರ್ಷ ದಾಖಲಾದ ಪ್ರಮಾಣಕ್ಕಿಂತ ಅಧಿಕವಾಗಿದೆ. ಆದರೆ ಐಟಿ/ಸಾಫ್ಟ್ವೇರ್ ಕ್ಷೇತ್ರದ ಸಾಧನೆ ಕಳೆದ ವರ್ಷಕ್ಕಿಂತ ಕಡಿಮೆ ಇದೆ. ಈ ವರ್ಷದ ಕ್ಯಾಂಪಸ್ ನೇಮಕಾತಿಯಲ್ಲಿ ಉದ್ಯೋಗ ಪಡೆದ ವಿದ್ಯಾರ್ಥಿಗಳ ಸರಾಸರಿ ವಾರ್ಷಿಕ ವೇತನ 21.8 ಲಕ್ಷ ಆಗಿದ್ದರೆ, ಹಿಂದಿನ ಎರಡು ವರ್ಷಗಳಲ್ಲಿ ಇದು ಅನುಕ್ರಮವಾಗಿ 21.5 ಲಕ್ಷ ಮತ್ತು 17.9 ಲಕ್ಷ ಆಗಿತ್ತು.
ಒಟ್ಟು 300 ಪ್ರಿ-ಪ್ಲೇಸ್ಮೆಂಟ್ ಆಫರ್ಗಳ ಪೈಕಿ 194 ವಿದ್ಯಾರ್ಥಿಗಳು ಆಫರ್ ಸ್ವೀಕರಿಸಿದ್ದಾರೆ. ಇವರಲ್ಲಿ 65 ಮಂದಿ ಅಂತರರಾಷ್ಟ್ರೀಯ ಆಫರ್ಗಳನ್ನು ಸ್ವೀಕರಿಸಿದ್ದಾರೆ. ಆದರೆ ಅಂತರರಾಷ್ಟ್ರೀಯ ಆಫರ್ಗಳ ಸಂಖ್ಯೆ ಕಳೆದ ಬಾರಿಗಿಂತ ಈ ಬಾರಿ ಕಡಿಮೆ. ಈ ಬಾರಿ ಅಮೆರಿಕ, ಜಪಾನ್, ಬ್ರಿಟನ್, ನೆದರ್ಲೆಂಡ್, ಹಾಂಕಾಂಗ್ ಮತ್ತು ತೈವಾನ್ನಿಂದ ವಿದೇಶಿ ಆಫರ್ಗಳು ಬಂದಿವೆ. ಉಕ್ರೇನ್ ಯುದ್ಧ ಮತ್ತು ಜಾಗತಿಕ ಆರ್ಥಿಕತೆ ಪ್ರಗತಿ ಕುಂಠಿತವಾಗಿರುವುದು ವಿದೇಶಿ ಆಫರ್ಗಳು ಕಡಿಮೆಯಾಗಲು ಕಾರಣ ಎಂದು ಸ್ಥಾನೀಕರಣ ಕಚೇರಿ ಹೇಳಿದೆ.
ಬಿಟೆಕ್, ಅವಳಿ ಪದವಿ ಮತ್ತು ಎಂಟೆಕ್ ಕೋರ್ಸ್ಗಳನ್ನು ಕಲಿತು ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಶೇಕಡ 90ರಷ್ಟು ವಿದ್ಯಾರ್ಥಿಗಳು ಉದ್ಯೋಗ ಪಡೆದಿದಾರೆ. 2022-23ನೇ ಸಾಲಿನಲ್ಲಿ ಕ್ಯಾಂಪಸ್ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ 1845 ಮಂದಿಯ ಪೈಕಿ 1516 ಮಂದಿ ಉದ್ಯೋಗ ಪಡೆದಿದ್ದಾರೆ.