ಐಐಟಿ ಖರಗ್‌ಪುರ ವಿದ್ಯಾರ್ಥಿ ಆತ್ಮಹತ್ಯೆ
ಅಧ್ಯಾಪಕರ ಒತ್ತಡವೇ ಕಾರಣ: ಕುಟುಂಬ ಆರೋಪ
ಕೋಲ್ಕತಾ: ಐಐಟಿ ಖರಗ್‌ಪುರದ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಒಂದು ದಿನದ ಬಳಿಕ ಗುರುವಾರ ಆತನ ಹೆತ್ತವರು, ‘‘ತಮ್ಮ ಪುತ್ರ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಸಂಸ್ಥೆಯ ಅಧ್ಯಾಪಕರೇ ಕಾರಣ’’ ಎಂದು ಆರೋಪಿಸಿದ್ದಾರೆ.
ಅಧ್ಯಾಪಕರು ಅನಗತ್ಯ ಒತ್ತಡ ಹೇರಿರುವುದರಿಂದ ತಮ್ಮ ಪುತ್ರ ಕೆ. ಕಿರಣ್ ಚಂದ್ರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅವರು ಆರೋಪಿಸಿದ್ದಾರೆ.
ಕೆ. ಕಿರಣ್ ಚಂದ್ರನ ತಂದೆ ಹಾಗೂ ಮಾವ ತಮ್ಮ ರಾಜ್ಯವಾದ ತೆಲಂಗಾಣದಿಂದ ವಿಶ್ವವಿದ್ಯಾನಿಲಯಕ್ಕೆ ಇಂದು ಬೆಳಗ್ಗೆ ಆಗಮಿಸಿದ್ದರು. ಅಲ್ಲದೆ, ಕಿರಣ್ ಚಂದ್ರ ನಿರ್ದಿಷ್ಟ ಅವಧಿಯ ಒಳಗೆ ಪ್ರಾಜೆಕ್ಟ್ ಪೂರ್ಣಗೊಳಿಸಬೇಕೆಂಬ ಅಧ್ಯಾಪಕರ ಒತ್ತಡಕ್ಕೆ ಒಳಗಾಗಿದ್ದ ಎಂದು ಅವರು ಹೇಳಿದ್ದಾರೆ.
ಕಿರಣ್ ಕಲಿಕೆಯಲ್ಲಿ ಹಿಂದುಳಿದಿದ್ದರೆ ನಮಗೆ ತಿಳಿಸಬಹುದಿತ್ತು. ಒತ್ತಡವನ್ನು ತಾಳಲಾರದೆ ಆತ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆದರೆ, ಐಐಟಿ ಖರಗ್‌ಪುರ ಆಡಳಿತ ಮಂಡಳಿ ವಿರುದ್ಧ ತಾವು ಯಾವುದೇ ಕಾನೂನು ಕ್ರಮ ಕೈಗೊಳ್ಳುವುದಿಲ್ಲ ಎಂದು ವಿದ್ಯಾರ್ಥಿಯ ತಂದೆ ಹಾಗೂ ಮಾವ ದೃಢಪಡಿಸಿದ್ದಾರೆ.
ಈ ನಡುವೆ ಐಜಿಟಿ ಖರಗ್‌ಪುರ ಹೇಳಿಕೆ ನೀಡಿ ಕಿರಣ್ ಚಂದ್ರ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ದೃಢಪಡಿಸಿದ್ದಾರೆ. ಕಳೆದ ವರ್ಷದಿಂದ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳ ನಿಗೂಢ ಸಾವು ಸಂಭವಿಸುತ್ತಿರುವ ಬಗ್ಗೆ ಐಐಟಿ ಖರಗ್‌ಪುರ ಮಾಧ್ಯಮಗಳ ಹೆಡ್‌ಲೈನ್ ಆಗುತ್ತಿದೆ.