ಅಕ್ರಮ ಕಟ್ಟಡ: ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ಗೆ ನೋಟಿಸ್
Photo- PTI
ಹೊಸದಿಲ್ಲಿ: ತೇಹ್ರಿ ಅಣೆಕಟ್ಟು ಯೋಜನೆಗಾಗಿ ನಿರಾಶ್ರಿತರಾದವರ ಪುನರ್ವಸತಿಗಾಗಿ ಗುರುತಿಸಲಾದ ಪ್ರದೇಶದಲ್ಲಿ ಅಕ್ರಮವಾಗಿ ಐದು ಕಟ್ಟಡಗಳನ್ನು ನಿರ್ಮಿಸಿದ ಆರೋಪದಲ್ಲಿ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಹಾಗೂ ಇತರ ನಾಲ್ವರಿಗೆ ಮುಸ್ಸೋರಿ ಡೆಹ್ರಾಡೂನ್ ಅಭಿವೃದ್ಧಿ ಪ್ರಾಧಿಕಾರ (ಎಂಡಿಡಿಎ)ವು ನೋಟಿಸ್ ಜಾರಿಗೊಳಿಸಿದೆ. ಉತ್ತರ ಖಂಡದ ಹೈಕೋರ್ಟ್ನ ಆದೇಶದಂತೆ ಈ ಕಟ್ಟಡಗಳಿಗೆ ಈಗಾಗಲೇ ಬೀಗಮುದ್ರೆ ಹಾಕಲಾಗಿದೆ.
15 ದಿನಗಳೊಳಗೆ ಈ ಬಗ್ಗೆ ಉತ್ತರಿಸುವಂತೆ ನಾಲ್ವರಿಗೂ ಪ್ರಾಧಿಕಾರ ನೋಟಿಸ್ ನೀಡಿದೆ. ಒಂದು ವೇಳೆ ಅವರು ನೀಡುವ ಉತ್ತರ ತೃಪ್ತಿಕರವಾಗಿರದಿದ್ದಲ್ಲಿ ಆ ಕಟ್ಟಡಗಳನ್ನು ಧ್ವಂಸಗೊಳಿಸಲಾಗುವುದು ಎಂದವರು ಹೇಳಿದರು.
ಟ್ರಸ್ಟಿ ಆಗಿದ್ದರೂ ಅಕ್ರಮ ಕಟ್ಟಡಗಳ ಒಡೆತನ ಹೊಂದಿಲ್ಲ: ಸಾಕ್ಷಿ
ಹೊಸದಿಲ್ಲಿ : ತೇರಿಅಣೆಕಟ್ಟು ನಿರ್ವಸಿತರಿಗೆ ಗುರುತಿಸಲಾಗಿದ್ದ ಪ್ರದೇಶದಲ್ಲಿ ತಾನು ಯಾವುದೇ ಆಸ್ತಿಯನ್ನು ಹೊಂದಿಲ್ಲವೆಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಗುರುವಾರ ತಿಳಿಸಿದ್ದಾರೆ. ಆದರೆ ಆ ಪ್ರದೇಶದಲ್ಲಿ ಅಕ್ರಮವಾಗಿ ತಲೆಯೆತ್ತಿರುವ ಐದು ಕಟ್ಟಡಗಳ ನಿರ್ಮಾಣವನ್ನು ಕೈಗೆತ್ತಿಕೊಂಡಿದ್ದ ಟ್ರಸ್ಟ್ನ ಟ್ರಸ್ಟಿ ತಾನೆಂಬುದನ್ನು ಅವರು ಒಪ್ಪಿಕೊಂಡಿದ್ದಾರೆ. ಈ ಪ್ರದೇಶದಲ್ಲಿ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡಿರುವ ಎಲ್ಲಾ ಆಸ್ತಿಗಳ ಮಾಲಕರು ಎಂಡಿಡಿಎನಿಂದ ನೋಟಿಸ್ ಪಡೆದಿದ್ದಾರೆ. ನಾವು ಕೂಡಾ ಕೆಲವು ತಿಂಗಳುಗಳ ಹಿಂದೆ ನೋಟಿಸ್ ಪಡೆದಿದ್ದೆವು. ಅದಕ್ಕೆ ನಾವು ಉತ್ತರಿಸಿದ್ದೇವೆ ಹಾಗೂ ಅವರು ಕೈಗೊಳ್ಳುವ ವಿಧಿವಿಧಾನಗಳಿಗೆ ಬದ್ಧವಾಗಿರಲು ನಾವು ಸಮ್ಮತಿಸುತ್ತೇವೆ’’ ಎಂದು ಮಹಾರಾಜ್ ಹೇಳಿದ್ದಾರೆ.
ಈ ಮಧ್ಯೆ ಉತ್ತರಾಖಂಡದಲ್ಲಿ ಅಕ್ರಮ ಕಟ್ಟಡಗಳ ನಿರ್ಮಾಣ ಅವ್ಯಾಹತವಾಗಿ ನಡೆಯುತ್ತಿರುವುದರ ಬಗ್ಗೆ ಆಡಳಿತಾರೂಢತ ಬಿಜೆಪಿ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ. ಸರಕಾರದ ಕೃಪೆಯಿಲ್ಲದೆ ಹೀಗೆ ನಡೆಯಲು ಸಾಧ್ಯವಿಲ್ಲವೆಂದು ಅವರು ಹೇಳಿದ್ದಾರೆ