994 ವಕ್ಫ್ ಆಸ್ತಿಗಳ ಅಕ್ರಮ ಒತ್ತುವರಿ: ಕೇಂದ್ರ ಸರ್ಕಾರ
ಸಾಂದರ್ಭಿಕ ಚಿತ್ರ PC: PTI
ಹೊಸದಿಲ್ಲಿ: ದೇಶಾದ್ಯಂತ ಒಟ್ಟು 994 ವಕ್ಫ್ ಆಸ್ತಿಗಳನ್ನು ಬೇರೆ ಉದ್ದೇಶಕ್ಕೆ ಬಳಸಿಕೊಳ್ಳಲಾಗಿದೆ ಅಥವಾ ಕಾನೂನು ಬಾಹಿರವಾಗಿ ಒತ್ತುವರಿ ಮಾಡಿಕೊಳ್ಳಲಾಗಿದೆ. ತಮಿಳುನಾಡು ರಾಜ್ಯವೊಂದರಲ್ಲೇ 734 ಇಂಥ ಆಸ್ತಿಗಳು ಒತ್ತುವರಿಯಾಗಿವೆ ಎಂದು ಕೇಂದ್ರ ಸರ್ಕಾರ ಸೋಮವಾರ ಸಂಸತ್ತಿನಲ್ಲಿ ಪ್ರಕಟಿಸಿದೆ.
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ ವಾದಿ) ಸದಸ್ಯ ಜಾನ್ ಬ್ರಿಟ್ಟಾಸ್ ಅವರ ಪ್ರಶ್ನೆಗಳಿಗೆ ಲಿಖಿತ ಉತ್ತರ ನೀಡಿದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಈ ಅಂಕಿ ಅಂಶಗಳನ್ನು ನೀಡಿದೆ. ದೇಶದಲ್ಲಿ 8,72,352 ಚರ ಹಾಗೂ 16,713 ಸ್ಥಿರ ವಕ್ಫ್ ಆಸ್ತಿಗಳು ವಕ್ಫ್ ಕಾಯ್ದೆಯಡಿ ನೋಂದಣಿಯಾಗಿವೆ ಎಂದು ಭಾರತದ ವಕ್ಫ್ ಆಸ್ತಿಗಳ ನಿರ್ವಹಣಾ ವ್ಯವಸ್ಥೆ (WAMSI) ಪೋರ್ಟಲ್ ನಲ್ಲಿ ಲಭ್ಯವಾಗಿರುವ ಮಾಹಿತಿಯನ್ನು ಉಲ್ಲೇಖಿಸಲಾಗಿದೆ.
"ವಾಂಸಿ ಪೋರ್ಟಲ್ ನಲ್ಲಿ ಲಭ್ಯ ಮಾಹಿತಿಗಳ ಪ್ರಕಾರ, 994 ವಕ್ಫ್ ಆಸ್ತಿಗಳನ್ನು ಅನ್ಯ ಉದ್ದೇಶಕ್ಕೆ ಬಳಸಿಕೊಳ್ಳಲಾಗಿದೆ" ಎಂದು ಅಲ್ಪಸಂಖ್ಯಾತರ ವ್ಯವಹಾರಗಳ ಖಾತೆ ಸಚಿವ ಕಿರಣ್ ರಿಜಿಜು ಸ್ಪಷ್ಟಪಡಿಸಿದರು. ಅನ್ಯ ಉದ್ದೇಶಗಳಿಗೆ ಬಳಸಿಕೊಳ್ಳುವುದು ಎಂದರೆ ವಕ್ಫ್ ಆಸ್ತಿಯನ್ನು ವರ್ಗಾಯಿಸಿರುವುದು ಅಥವಾ ಕಾನೂನು ಬಾಹಿರವಾಗಿ ಒತ್ತುವರಿ ಮಾಡಿಕೊಂಡಿರುವುದು.
ದೇಶಾದ್ಯಂತ ಇರುವ ವಕ್ಫ್ ಆಸ್ತಿಗಳ ಸಂಖ್ಯೆ, ರಾಜ್ಯವಾರು ಅಂಕಿ ಅಂಶಗಳು, ಕಾನೂನು ಬಾಹಿರವಾಗಿ ಅನ್ಯಕಾರ್ಯಗಳಿಗೆ ಬಳಸಿಕೊಂಡಿರುವ ಕಳಕಳಿಯ ಬಗ್ಗೆ ಆಸ್ತಿ ವಿವರಗಳ ಸಹಿತ ಮಾಹಿತಿ ನೀಡುವಂತೆ ಬ್ರಿಟ್ಟಾಸ್ ಕೋರಿದ್ದರು.
ತಮಿಳುನಾಡಿನಲ್ಲಿ ಗರಿಷ್ಠ (734) ವಕ್ಫ್ ಆಸ್ತಿಗಳು ಒತ್ತುವರಿಯಾಗಿದ್ದು, ಆಂಧ್ರಪ್ರದೇಶದಲ್ಲಿ 152, ಪಂಜಾಬ್ ನಲ್ಲಿ 63, ಉತ್ತರಾ ಖಂಡದಲ್ಲಿ 11 ಮತ್ತು ಜಮ್ಮು-ಕಾಶ್ಮೀರದಲ್ಲಿ 10 ಆಸ್ತಿಗಳು ಒತ್ತುವರಿಯಾಗಿವೆ ಎಂದು ವಿವರಿಸಿದ್ದಾರೆ.