ಅಮೆರಿಕಕ್ಕೆ ಅಕ್ರಮ ವಲಸೆ | ಏಜಂಟರುಗಳಲ್ಲಿ ಗುಜರಾತಿಗರೇ ಹೆಚ್ಚು!

ಸಾಂದರ್ಭಿಕ ಚಿತ್ರ | PC : ixigo.com
ಮೋದಿಯವರು ಪ್ರಧಾನಿಯಾಗಿರುವ ಕಾಲದಲ್ಲಿ, ಮೋದಿಯವರು ಅಮೃತಕಾಲದ ಬಗ್ಗೆ ಮಾತಾಡುತ್ತಿರುವ ಹೊತ್ತಿನಲ್ಲಿ, 2047ರ ವಿಕಸಿತ ಭಾರತದ ಭ್ರಮೆಗಳನ್ನು ಬಿತ್ತುತ್ತಿರುವ ಹೊತ್ತನಲ್ಲಿ ಮೋದಿಯವರ ತವರು ರಾಜ್ಯದ ಜನರೇ ಹೆಚ್ಚಾಗಿ ಅಮೆರಿಕ ಅಕ್ರಮ ಪ್ರವೇಶಕ್ಕೆ ವಿಫಲ ಯತ್ನ ನಡೆಸುತ್ತಿರುವುದು ಮಾತ್ರ ವಿಪರ್ಯಾಸ.
ಅಮೆರಿಕಕ್ಕೆ ಅಕ್ರಮವಾಗಿ ಕಳಿಸುವ ಜಾಲದಲ್ಲಿ ಕೆಲಸ ಮಾಡುವ ಏಜಂಟರುಗಳಲ್ಲೂ ಗುಜರಾತಿನವರೇ ಹೆಚ್ಚು ಎಂಬುದು ಕೂಡ ಬಯಲಾಗಿದೆ. ಅಕ್ರಮವಾಗಿ ಅಮೆರಿಕ ಪ್ರವೇಶಿಸಲು ಗುಜರಾತ್ ವ್ಯಕ್ತಿ ಆಡಿದ ಆಟ ವಲಸೆ ಅಧಿಕಾರಿಗಳನ್ನು ದಿಗ್ಭ್ರಮೆಗೊಳಿಸಿದೆ. ಆತ ಪಾಕಿಸ್ತಾನಿ ಪ್ರಜೆಗೆ ಸೇರಿದ ಪಾಸ್ ಪೋರ್ಟ್ ನ ನಕಲಿಯನ್ನು ಬಳಸಿರುವುದು ಪತ್ತೆಯಾಗಿದೆ.
ವರದಿಯ ಪ್ರಕಾರ, ಗುಜರಾತ್ ನ ಎಸಿ ಪಟೇಲ್ ಎಂಬಾತ ಅಮೆರಿಕ ಪ್ರವೇಶಿಸುವ ಪ್ರಯತ್ ನದಲ್ಲಿ ಮುಹಮ್ಮದ್ ನಝೀರ್ ಹುಸೇನ್ ಅವರ ಸುಳ್ಳು ಗುರುತನ್ನು ಬಳಸಿದ್ದಾನೆ. ಅವರು ಈ ಹಿಂದೆ ತಮ್ಮ ಪಾಸ್ ಪೋರ್ಟ್ ಕಳೆದುಹೋಗಿದ್ದರ ಬಗ್ಗೆ ದೂರು ನೀಡಿದ್ದರು.
ಪಟೇಲ್ ತನ್ನ ಗುರುತನ್ನು ನಕಲಿ ಮಾಡಲು ದುಬೈನಲ್ಲಿ ಏಜೆಂಟ್ ಗೆ ಹಣ ಪಾವತಿಸಿರುವುದು ತನಿಖೆ ವೇಳೆ ತಿಳಿದುಬಂದಿದೆ. ಆತನ ನಿಜವಾದ ಭಾರತೀಯ ಪಾಸ್ ಪೋರ್ಟ್ 2016ರಲ್ಲಿ ಮುಕ್ತಾಯಗೊಂಡಿತ್ತು. ಆದರೆ ಅದನ್ನು ಕಾನೂನುಬದ್ಧವಾಗಿ ನವೀಕರಿಸುವ ಬದಲು, ಆತ ಅಕ್ರಮವಾಗಿ ಅಮೆರಿಕಕ್ಕೆ ನುಸುಳಲು ಮುಂದಾಗಿದ್ದ. ವಲಸೆ ತಪಾಸಣೆಯ ಸಮಯದಲ್ಲಿ ಅಮೆರಿಕ ಅಧಿಕಾರಿಗಳು ಅದು ನಕಲಿ ದಾಖಲೆ ಎಂಬುದನ್ನು ಪತ್ತೆ ಮಾಡಿದ ನಂತರ ಆತನನ್ನು ಗಡೀಪಾರು ಮಾಡಿದ್ದಾರೆ.
ಫೆಬ್ರವರಿ 12 ರಂದು ಎಎ-292 ವಿಮಾನದ ಮೂಲಕ ಆತ ದಿಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾನೆ. ಆತನನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ. ಈಗ ಪಾಸ್ ಪೋರ್ಟ್ ದುರುಪಯೋಗ ಸೇರಿದಂತೆ ಗಂಭೀರ ಆರೋಪಗಳನ್ನು ಆತ ಎದುರಿಸಬೇಕಾಗಿದೆ.
ಭಾರತದಲ್ಲಿ ಸಕ್ರಿಯವಾಗಿರುವ ಮಾನವ ಕಳ್ಳಸಾಗಣೆ ಜಾಲದ ತನಿಖೆಯಲ್ಲಿ ಸಾವಿರಾರು ಸ್ಥಳೀಯ ಏಜೆಂಟರು ಮತ್ತು ಕನಿಷ್ಠ 150 ಕೆನಡಾದ ಕಾಲೇಜುಗಳು ಅಮೆರಿಕಕ್ಕೆ ಅಕ್ರಮ ಪ್ರವೇಶಕ್ಕೆ ಅನುಕೂಲ ಮಾಡಿಕೊಡುತ್ತಿರುವುದು ಬೆಳಕಿಗೆ ಬಂದಿದೆ ಎಂದು ಈಡಿ ಮೂಲಗಳು ತಿಳಿಸಿವೆ.
ದೇಶದಲ್ಲಿ ಸುಮಾರು 4,000 ರಿಂದ 4,500 ಕಳ್ಳಸಾಗಣೆ ಏಜೆಂಟರಿದ್ದು, ಅವರಲ್ಲಿ ಗುಜರಾತಿನವರೇ 2,000 ಮಂದಿಯಿದ್ದಾರೆ
ಎಂದು ಈಡಿ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ದಿ ಟೆಲಿಗ್ರಾಫ್ ವರದಿ ಮಾಡಿದೆ. ಟ್ರಂಪ್ ಸರ್ಕಾರ ಅಕ್ರಮ ಭಾರತೀಯ ವಲಸಿಗರನ್ನು ಗಡೀಪಾರು ಮಾಡುತ್ತಿರುವುದರ ನಡುವೆಯೇ ಈ ವಿಚಾರ ಬಹಿರಂಗಗೊಂಡಿದೆ. ಕೆನಡಾ ಮೂಲಕ ಅಮೆರಿಕಕ್ಕೆ ಭಾರತೀಯರನ್ನು ಕಳ್ಳಸಾಗಣೆ ಮಾಡುವ ಜಾಲದಲ್ಲಿ ಗುಜರಾತ್ ನಲ್ಲಿ ಸುಮಾರು 2,000 ಏಜೆಂಟರು ಸಕ್ರಿಯರಾಗಿದ್ದಾರೆ. ಕೆನಡಾದಲ್ಲಿ ಸಿಂಡಿಕೇಟ್ ಸದಸ್ಯರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ತನಿಖೆಗಳಿಂದ ತಿಳಿದಿರುವುದಾಗಿ ಈಡಿ ಅಧಿಕಾರಿ ಹೇಳಿದ್ದಾರೆ.
ಕೆಲವು ಏಜೆಂಟರನ್ನು ಗುರುತಿಸಲಾಗಿದ್ದು, ಅವರನ್ನು ಬಂಧಿಸಲು ದಾಳಿ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಅಧಿಕಾರಿ ವಿವರಿಸಿದ ಪ್ರಕಾರ, ಈ ಭಾರತೀಯ ಏಜೆಂಟರು ಅಮೆರಿಕೆಗೆ ಹೋಗಬಯಸುವವರನ್ನು ಕೆನಡಾದ ಕಾಲೇಜುಗಳಿಗೆ, ಅದಲ್ಲಿಯೂ ಅಮೆರಿಕ ಗಡಿಯ ಸಮೀಪದಲ್ಲಿರುವ ಕಾಲೇಜುಗಳಿಗೆ ವಿದ್ಯಾರ್ಥಿ ವೀಸಾಗಳಲ್ಲಿ ಸೇರಿಸಿಕೊಳ್ಳುತ್ತಾರೆ.ವಲಸಿಗರು ಕೆನಡಾ ತಲುಪಿದ ನಂತರ, ಅಕ್ರಮವಾಗಿ ಅಮೆರಿಕ-ಕೆನಡಾ ಗಡಿಯನ್ನು ದಾಟುತ್ತಾರೆ.
2021ರ ನವೆಂಬರ್ ನಿಂದ 2024ರ ಜುಲೈ ವರೆಗಿನ ಅವಧಿಯಲ್ಲಿ ಗುಜರಾತ್ ನ ವಿದ್ಯಾರ್ಥಿಗಳೆಂಬ ಸೋಗಿನ ಹಲವರ ಪರವಾಗಿ ಕೆನಡಾದ ಹಲವಾರು ಕಾಲೇಜುಗಳಿಗೆ 12,000 ಕ್ಕೂ ಹೆಚ್ಚು ಹಣಕಾಸು ವಹಿವಾಟುಗಳು ನಡೆದಿರುವುದು ಗಮನಕ್ಕೆ ಬಂದಿರುವುದಾಗಿಯೂ ಅಧಿಕಾರಿ ಹೇಳಿದ್ದಾರೆ.
ಹೀಗೆ ಶುಲ್ಕದ ಹೆಸರಲ್ಲಿ ಅಲ್ಲಿನ ಕಾಲೇಜುಗಳಿಗೆ ವರ್ಗಾವಣೆಯಾಗುವ ಹಣ ಕಮಿಷನ್ ಆಗಿರುತ್ತದೆ ಮತ್ತು ಒಬ್ಬೊಬ್ಬರಿಗೆ 55 ಲಕ್ಷದಿಂದ 60 ಲಕ್ಷದವರೆಗೂ ಇದೆ ಎಂದು ಅಧಿಕಾರಿ ಹೇಳಿದ್ದಾರೆ. ಅಕ್ರಮ ವಲಸಿಗರಿಗೆ ಈ ವಿದ್ಯಾರ್ಥಿ ವೀಸಾ ಉಪಾಯ ಅಪಾಯಕಾರಿ ಡಂಕಿ ರೂಟ್ ಗಿಂತ ಸುಲಭ ಎನ್ನಿಸಿದೆ ಎಂಬುದನ್ನು ಕೂಡ ಅಧಿಕಾರಿ ಹೇಳುತ್ತಾರೆ.
2022 ರ ಜನವರಿಯಲ್ಲಿ ಗುಜರಾತ್ ನ ಗಾಂಧಿನಗರದ ಡಿಂಗುಚಾ ಗ್ರಾಮದ ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಸದಸ್ಯರು ಅಕ್ರಮವಾಗಿ ಅಮೆರಿಕ-ಕೆನಡಾ ಗಡಿಯನ್ನು ದಾಟಲು ಪ್ರಯತ್ನಿಸುವಾಗ ಸಾವನ್ನಪ್ಪಿದ ಘಟನೆ ಈಡಿ ತನಿಖೆಯಲ್ಲಿದೆ.
ಜಗದೀಶ್ ಪಟೇಲ್, ಪತ್ನಿ ವೈಶಾಲಿಬೆನ್, ಮತ್ತು ಅವರ ಮಗಳು ವಿಹಂಗಿ, ಮಗ ಧಾರ್ಮಿಕ್ ಕೆನಡಾದ ಮ್ಯಾನಿಟೋಬಾ ಪ್ರಾಂತ್ಯದ ಎಮರ್ಸನ್ ಪಟ್ಟಣದ ಬಳಿ ಶವವಾಗಿ ಪತ್ತೆಯಾಗಿದ್ದರು. ಮಾನವ ಕಳ್ಳಸಾಗಣೆ ದಂಧೆಗೆ ಸಂಬಂಧಿಸಿದಂತೆ ಕಳೆದ ಡಿಸೆಂಬರ್ನಲ್ಲಿ ಮುಂಬೈ, ನಾಗ್ಪುರ, ಗಾಂಧಿನಗರ ಮತ್ತು ವಡೋದರಾದ ಎಂಟು ಸ್ಥಳಗಳ ಮೇಲೆ ಈಡಿ ದಾಳಿ ನಡೆಸಿತ್ತು.
ಮುಂಬೈ, ನಾಗ್ಪುರ ಮತ್ತು ವಡೋದರಾದಲ್ಲಿನ ಮೂರು ಸಂಸ್ಥೆಗಳು ಭಾರತೀಯರ ಪ್ರವೇಶಕ್ಕಾಗಿ ಕೆಲ ವಿದೇಶಿ ವಿವಿಗಳೊಂದಿಗೆ ಒಪ್ಪಂದ ಮಾಡಿಕೊಂಡಿವೆ ಎಂಬುದು ತನಿಖೆಯಿಂದ ತಿಳಿದುಬಂದಿದೆ ಎಂದು ಈಡಿ ಅಧಿಕಾರಿ ತಿಳಿಸಿದ್ದಾರೆ. 150 ಕ್ಕೂ ಹೆಚ್ಚು ಕೆನಡಾದ ಕಾಲೇಜುಗಳು ಮಹಾರಾಷ್ಟ್ರ ಮೂಲದ ಒಂದು ಸಂಸ್ಥೆಯೊಂದಿಗೆ ಮತ್ತು 112 ಕೆನಡಾದ ಕಾಲೇಜುಗಳು ಇನ್ನೊಂದು ಸಂಸ್ಥೆಯೊಂದಿಗೆ ಅಂತಹ ಒಪ್ಪಂದವನ್ನು ಮಾಡಿಕೊಂಡಿರುವುದು ಕಂಡುಬಂದಿದೆ ಎಂದು ಅವರು ಹೇಳಿದ್ದಾರೆ.
ಭಾರತದಿಂದ ಕೆನಡಾ ಮೂಲಕ ಅಮೆರಿಕಕ್ಕೆ ಅಕ್ರಮ ವಲಸೆ ಹೆಚ್ಚಾಗಿದ್ದು, ಕಳೆದ ವರ್ಷ ಗಡಿಯಲ್ಲಿ 14,000 ಕ್ಕೂ ಹೆಚ್ಚು ಭಾರತೀಯ ವಲಸಿಗರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಮೆರಿಕದ ಅಂದಾಜಿನ ಪ್ರಕಾರ, 7,25,000 ಕ್ಕೂ ಹೆಚ್ಚು ಭಾರತೀಯರು ಅಮೆರಿಕದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದಾರೆ. 2009 ರಿಂದ 2024 ರ ಅವಧಿಯಲ್ಲಿ ಸುಮಾರು 16,000 ಭಾರತೀಯರನ್ನು ಅಮೆರಿಕದಿಂದ ಗಡೀಪಾರು ಮಾಡಲಾಗಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಒಟ್ಟಾರೆ ದೇಶದಲ್ಲೇ ಮಾದರಿ ರಾಜ್ಯ, ಅಭಿವೃದ್ಧಿಯಲ್ಲಿ ದೇಶಕ್ಕೆ ಮಾತ್ರವಲ್ಲ ಜಗತ್ತಿಗೇ ರೋಲ್ ಮಾಡೆಲ್ ಆಗಿದೆ ಎಂದು ಪ್ರಚಾರ ಮಾಡಿಕೊಂಡ ಪ್ರಧಾನಿ ಮೋದೀಜಿ ತವರು ರಾಜ್ಯ ಗುಜರಾತ್ ಈಗ ಅಕ್ರಮ ವಲಸಿಗರ ರಾಜ್ಯವಾಗಿ ಜಾಗತಿಕವಾಗಿ ದೇಶಕ್ಕೆ ಕಳಂಕ ತಂದಿದೆ. ಮೋದೀಜಿ ಸಿಎಂ ಆಗಿದ್ದ ಅವಧಿಯಲ್ಲಿ ಗುಜರಾತ್ ಇನ್ನಿಲ್ಲದಂತೆ ಅಭಿವೃದ್ಧಿ ಕಂಡಿದೆ, ಅಲ್ಲಿ ಇನ್ನು ಆಗಬೇಕಾದ ಕೆಲಸ ಏನೇನೂ ಇಲ್ಲ ಎಂದೇ ಮಡಿಲ ಮೀಡಿಯಾಗಳು ವರ್ಷಗಟ್ಟಲೆ ಪ್ರಚಾರ ಮಾಡಿದ್ದವು.
ಆದರೆ ಈಗ ನೋಡಿದರೆ ಅದೇ ಗುಜರಾತಿನ ಸಾವಿರಾರು ಜನರು ತಮ್ಮ ಮನೆ ಮಠ ಮಾರಿ ಲಕ್ಷಗಟ್ಟಲೆ ದುಡ್ಡು ಏಜೆಂಟರಿಗೆ ಕೊಟ್ಟು ಅಪಾಯಕಾರಿ ಅಕ್ರಮ ದಾರಿ ಮೂಲಕ ಅಮೆರಿಕಕ್ಕೆ ಓಡುತ್ತಿದ್ದಾರೆ. ಹೀಗೆ ಅಕ್ರಮವಾಗಿ ಹೋಗುವಾಗ ಸಿಕ್ಕಿ ಬಿದ್ದು ಜೈಲು ಪಾಲಾಗುತ್ತಿದ್ದಾರೆ, ಅಥವಾ ಗಡಿಯಲ್ಲಿ ಚಳಿ ಮಳೆ ಗಾಳಿ ಸಹಿಸಲು ಸಾಧ್ಯವಾಗದೆ ಪ್ರಾಣ ಬಿಡುತ್ತಿದ್ದಾರೆ. ಹೇಗೂ ಹೋಗಿ ಅಮೆರಿಕಕ್ಕೆ ನುಸುಳಿದವರು ಈಗ ಸಂಕೋಲೆಗಳಲ್ಲಿ ಬಂಧಿತರಾಗಿ ವಾಪಸ್ ಬರುತ್ತಿದ್ದಾರೆ. ಅಲ್ಲಿಗೆ ಗುಜರಾತ್ ಮಾದರಿ ಎಂಬ ಪ್ರಚಾರವೂ ಬರೀ ಜುಮ್ಲಾ ಮಾತ್ರ ಆಗಿತ್ತಾ ಎಂಬ ಪ್ರಶ್ನೆಯೊಂದು ಉಳಿದು ಬಿಡುತ್ತದೆ.