ಅಕ್ರಮ ಹಣ ವರ್ಗಾವಣೆ ಪ್ರಕರಣ | ಈ.ಡಿ.ಯಿಂದ ಬಂಧನ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಹೊಸದಾಗಿ ಅರ್ಜಿ ಸಲ್ಲಿಸಿದ ಹೇಮಂತ ಸೊರೇನ್

ಹೇಮಂತ ಸೊರೇನ್ | PC : ANI
ಹೊಸದಿಲ್ಲಿ: ಮಾಜಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ ಸೊರೇನ್ ಅವರು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಈ.ಡಿ.)ದಿಂದ ತನ್ನ ಬಂಧನವನ್ನು ಪ್ರಶ್ನಿಸಿ ಬುಧವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಹೊಸದಾಗಿ ಅರ್ಜಿಯನ್ನು ಸಲ್ಲಿಸಿದ್ದಾರೆ.
ತನ್ನ ಅರ್ಜಿಯ ಮೇಲಿನ ವಾದವಿವಾದಗಳು ಫೆ.28ರಂದು ಅಂತ್ಯಗೊಂಡಿದ್ದರೂ ಜಾರ್ಖಂಡ್ ಉಚ್ಚ ನ್ಯಾಯಾಲಯವು ತನ್ನ ತೀರ್ಪನ್ನು ಪ್ರಕಟಿಸಿಲ್ಲ ಎಂದು ಸೊರೇನ್ ತಿಳಿಸಿದ್ದಾರೆ.
ಜೆಎಂಎಂ ನಾಯಕರೂ ಆಗಿರುವ ಸೊರೇನ್ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ ಬೆನ್ನಿಗೇ ಜ.31ರಂದು ಈ.ಡಿ.ಅವರನ್ನು ಬಂಧಿಸಿದ್ದು,ಆಗಿನಿಂದಲೂ ಅವರು ಜೈಲಿನಲ್ಲಿದ್ದಾರೆ. ಸೊರೇನ್ ಅವರ ಜೆಎಂಎಂ ಇಂಡಿಯಾ ಮೈತ್ರಿಕೂಟದ ಭಾಗವಾಗಿದೆ.
ಸೊರೇನ್ ಇದಕ್ಕೂ ಮುನ್ನ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರಾದರೂ ಉಚ್ಚ ನ್ಯಾಯಾಲಯವನ್ನು ಸಂಪರ್ಕಿಸುವಂತೆ ಅದು ಫೆ.2ರಂದು ಸೊರೇನ್ ಗೆ ಸೂಚಿಸಿತ್ತು.
ಬುಧವಾರ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ತುರ್ತು ವಿಚಾರಣೆಯನ್ನು ಕೋರಿ ಅರ್ಜಿಯನ್ನು ನ್ಯಾ.ಸಂಜೀವ ಖನ್ನಾ ಅವರ ಮುಂದೆ ಉಲ್ಲೇಖಿಸಿದರು.
ತೀರ್ಪು ಪ್ರಕಟಿಸಲು ಉಚ್ಚ ನ್ಯಾಯಾಲಯದ ವಿಳಂಬದಿಂದಾಗಿ ಚುನಾವಣೆಗಳು ಮುಗಿಯುವವರೆಗೂ ಸೊರೇನ್ ಜೈಲಿನಲ್ಲಿರುವಂತಾಗುತ್ತದೆ ಎಂದು ಅವರು ತಿಳಿಸಿದರು.
ವಿಚಾರಣೆಯ ದಿನಾಂಕವನ್ನು ಮುಖ್ಯ ನ್ಯಾಯಮೂರ್ತಿಗಳ ಕಚೇರಿಯು ನಿಗದಿ ಪಡಿಸುತ್ತದೆ ಎಂದು ನ್ಯಾ.ಖನ್ನಾ ಹೇಳಿದರು.
ತನ್ನ ವಿರುದ್ಧ ಕಾನೂನು ಕ್ರಮ ಮತ್ತು ಬಂಧನ ರಾಜಕೀಯ ಪ್ರೇರಿತವಾಗಿವೆ. ಬಿಜೆಪಿಯನ್ನು ಸೇರುವಂತೆ ಅಥವಾ ಅದರ ನೇತೃತ್ವದ ಎನ್ಡಿಎ ಜೊತೆ ಮೈತ್ರಿ ಮಾಡಿಕೊಳ್ಳುವಂತೆ ತನ್ನ ಮೇಲೆ ಒತ್ತಡ ಹೇರಲು ಕೇಂದ್ರವು ತನ್ನ ಬಂಧನವನ್ನು ಬಳಸಿಕೊಳ್ಳುತ್ತಿದೆ ಎಂದು ಸೊರೇನ್ ಆರೋಪಿಸಿದ್ದಾರೆ.
ಭೂ ಹಗರಣ ಆರೋಪಕ್ಕೆ ಸಂಬಂಧಿಸಿದಂತೆ ಮಾ.30ರಂದು ದೋಷಾರೋಪ ಪಟ್ಟಿಯನ್ನು ಸಲ್ಲಿಸಿರುವ ಈ.ಡಿ.ಸೊರೇನ್ ಜೊತೆಗೆ ಇತರ ನಾಲ್ವರನ್ನೂ ಆರೋಪಿಗಳನ್ನಾಗಿ ಹೆಸರಿಸಿದೆ. ಸೊರೇನ್ಗೆ ಸೇರಿದ್ದೆನ್ನಲಾದ 8.86 ಎಕರೆ ಜಮೀನನ್ನು ಈ.ಡಿ.ಸ್ವಾಧೀನ ಪಡಿಸಿಕೊಂಡಿದೆ.