ಅಕ್ರಮ ಹಣ ವರ್ಗಾವಣೆ ಪ್ರಕರಣ | ತನ್ನ ಬಂಧನವನ್ನು ಪ್ರಶ್ನಿಸಿದ್ದ ಹೇಮಂತ ಸೊರೇನ್ ಅರ್ಜಿಯನ್ನು ತಿರಸ್ಕರಿಸಿದ ಜಾರ್ಖಂಡ್ ಹೈಕೋರ್ಟ್

ಹೇಮಂತ ಸೊರೇನ್ | PC : PTI
ರಾಂಚಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ(ಈಡಿ)ದಿಂದ ತನ್ನ ಬಂಧನವನ್ನು ಪ್ರಶ್ನಿಸಿ ಮಾಜಿ ಮುಖ್ಯಮಂತ್ರಿ ಹೇಮಂತ ಸೊರೇನ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಜಾರ್ಖಂಡ್ ಉಚ್ಚ ನ್ಯಾಯಾಲಯವು ಶುಕ್ರವಾರ ತಿರಸ್ಕರಿಸಿದೆ.
ಹಂಗಾಮಿ ಮುಖ್ಯ ನ್ಯಾಯಮೂರ್ತಿ ಚಂದ್ರಶೇಖರ್ ಮತ್ತು ನ್ಯಾ.ನವನೀತ್ ಕುಮಾರ್ ಅವರ ಪೀಠವು ಫೆ.28ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ತೀರ್ಪನ್ನು ಪ್ರಕಟಿಸುವಲ್ಲಿ ಉಚ್ಚನ್ಯಾಯಾಲಯದ ವಿಳಂಬವನ್ನು ಪ್ರಶ್ನಿಸಿ ಸೊರೇನ್ ಎ.24ರಂದು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು.
ಸೋಮವಾರ ಈಡಿಗೆ ನೋಟಿಸನ್ನು ಹೊರಡಿಸಿದ್ದ ಸರ್ವೋಚ್ಚ ನ್ಯಾಯಾಲಯವು, ತನ್ನ ತೀರ್ಪನ್ನು ಪ್ರಕಟಿಸಲು ಉಚ್ಚನ್ಯಾಯಾಲಯವು ಸ್ವತಂತ್ರವಾಗಿದೆ ಎಂದು ಹೇಳಿತ್ತು.
ಪ್ರತ್ಯೇಕ ಅರ್ಜಿಯೊಂದಕ್ಕೆ ಸಂಬಂಧಿಸಿದಂತೆ ನ್ಯಾ.ರೊಂಗೋನ್ ಮುಖ್ಯೋಪಾಧ್ಯಾಯ ಅವರು ಮಾಧ್ಯಮಗಳೊಂದಿಗೆ ಮಾತನಾಡಕೂಡದು ಎಂಬ ನಿರ್ಬಂಧದೊಂದಿಗೆ ಪೋಲಿಸ್ ಬೆಂಗಾವಲಿನಲ್ಲಿ ತನ್ನ ಚಿಕ್ಕಪ್ಪನ ಅಂತಿಮ ಕ್ರಿಯೆಗಳಲ್ಲಿ ಪಾಲ್ಗೊಳ್ಳಲು ಸೋರೇನ್ ಗೆ ಅನುಮತಿಯನ್ನು ನೀಡಿದರು.
ಸೊರೇನ್ ಜ.31ರಿಂದ ಬಂಧನದಲ್ಲಿದ್ದಾರೆ.