ನಾನು ವಿವಾಹಿತ ವ್ಯಕ್ತಿ, ನನಗೆ ಕೋಪ ಬರುವುದೇ ಇಲ್ಲ: ಮಲ್ಲಿಕಾರ್ಜುನ್ ಖರ್ಗೆಗೆ ಸಭಾಪತಿ ಧನ್ಕರ್ ತಮಾಷೆಯ ಪ್ರತಿಕ್ರಿಯೆ
Photo: ಮಲ್ಲಿಕಾರ್ಜುನ್ ಖರ್ಗೆ, ಸಭಾಪತಿ ಧನ್ಕರ್ | PTI
ಹೊಸದಿಲ್ಲಿ: ಮಣಿಪುರ ಹಿಂಸಾಚಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ಹೇಳಿಕೆ ನೀಡುವಂತೆ ಒತ್ತಾಯಿಸಿದ ಪ್ರತಿಪಕ್ಷಗಳು ಮತ್ತು ಆಡಳಿತ ಪಕ್ಷದ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆಯುತ್ತಿರುವ ನಡುವೆಯೇ ರಾಜ್ಯಸಭೆಯಲ್ಲಿ ತಿಳಿಹಾಸ್ಯದ ಪ್ರಸಂಗ ನಡೆದಿದೆ.
ಗುರುವಾರ ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸಭಾಪತಿ ಜಗದೀಪ್ ಧನ್ಕರ್ ಅವರಿಗೆ ʼನೀವು ಕೋಪಗೊಂಡಿದ್ದೀರಿʼ ಎಂದು ಹೇಳಿರುವುದಕ್ಕೆ ಧನ್ಕರ್ ಅವರು ನೀಡಿರುವ ಪ್ರತಿಕ್ರಿಯೆ ಹಾಗೂ ಖರ್ಗೆ ಅವರ ಪ್ರತ್ಯುತ್ತರ ಸಾಕಷ್ಟು ಗಮನ ಸೆಳೆದಿದೆ.
ಧನ್ಕರ್ ರನ್ನು ಉಲ್ಲೇಖಿಸಿ ಮಾತನಾಡಿದ ಖರ್ಗೆ ಅವರು “ಬಹುಶಃ ನೀವು ಸ್ವಲ್ಪ ಕೋಪಗೊಂಡಿದ್ದೀರಿ” ಎಂದು ಹೇಳಿದ್ದಾರೆ. ಇದಕ್ಕೆ ತಮಾಷೆಯಿಂದಲೇ ಪ್ರತಿಕ್ರಿಯಿಸಿದ ಧನಕರ್, “ನಾನು 45 ವರ್ಷಗಳಿಂದ ವಿವಾಹಿತ ವ್ಯಕ್ತಿ. ನನ್ನನ್ನು ನಂಬಿ ಸಾರ್, ನಾನು ಎಂದಿಗೂ ಕೋಪಗೊಳ್ಳುವುದಿಲ್ಲ. ನಮಗೆ ಮೇಲಿನವರ ಮೇಲೆ ಕೋಪವನ್ನು ತೋರಿಸುವ ಹಕ್ಕು ಇಲ್ಲ. ನೀವೇ ಮೇಲಿನವರು ಸಾರ್. ನಾನು ಎಂದಿಗೂ ಕೋಪಗೊಳ್ಳುವುದಿಲ್ಲ, ದಯವಿಟ್ಟು ನಿಮ್ಮ ಹೇಳಿಕೆಯನ್ನು ಬದಲಾಯಿಸಿ” ಎಂದು ತಮಾಷೆ ಮಾಡಿದ್ದಾರೆ.
ಧನಕರ್ ಮಾತಿಗೆ ರಾಜ್ಯಸಭೆಯ ಸದಸ್ಯರು ನಗುತ್ತಿದ್ದಂತೆ, ಪ್ರತಿಕ್ರಿಯಿಸಿದ ಖರ್ಗೆ ಅವರು, “ನೀವು ನಿಮ್ಮ ಕೋಪವನ್ನು ಹೊರಗೆ ತೋರಿಸುವುದಿಲ್ಲ, ಆದರೆ ಒಳಗಿನಿಂದ ಬೇಕಾದಷ್ಟು ನೀವು ಕೋಪ ಹೊಂದಿದ್ದೀರಿ” ಎಂದರು.
ತನ್ನ ಪತ್ನಿ ರಾಜ್ಯಸಭೆಯ ಸದಸ್ಯರಲ್ಲದ ಕಾರಣ ಇಲ್ಲಿ ಅವರ ಬಗ್ಗೆ ಚರ್ಚಿಸಲು ಬರುವುದಿಲ್ಲ ಎಂದು ಧನಕರ್ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.