ಐಎಂಡಿ, ಜಿಎಸ್ಐ/ಸಿಡಬ್ಲ್ಯುಸಿ ಒಂದು ಬಾರಿ ಕೂಡ ರೆಡ್ ಅಲರ್ಟ್ ಜಾರಿಗೊಳಿಸಿಲ್ಲ: ಪಿಣರಾಯಿ ವಿಜಯನ್
ಕೇಂದ್ರ ಗೃಹ ಸಚಿವ ಅಮಿತ್ ಶಾ , ಪಿಣರಾಯಿ ವಿಜಯನ್ | PTI
ತಿರುವನಂತಪುರ: ವಯನಾಡ್ನಲ್ಲಿ ಭೂಕುಸಿತ ಸಂಭವಿಸುವ ಬಗ್ಗೆ ಕೇಂದ್ರ ಸರಕಾರ ಮೊದಲೇ ಎಚ್ಚರಿಕೆ ನೀಡಿತ್ತು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪ್ರತಿಪಾದನೆಯನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬುಧವಾರ ನಿರಾಕರಿಸಿದ್ದಾರೆ.
ಸಂಸತ್ತಿನಲ್ಲಿ ಬುಧವಾರ ಬೆಳಗ್ಗೆ ಅಮಿತ್ ಶಾ ಅವರು, ಕೇಂದ್ರ ಸರಕಾರ ಜುಲೈ 23ಕ್ಕಿಂತ ಮೊದಲೇ ಹಲವು ಬಾರಿ ಮುನ್ನೆಚ್ಚರಿಕೆ ನೀಡಿದರೂ ಕೇರಳ ಸರಕಾರ ನಿರ್ಲಕ್ಷಿಸಿತು ಎಂದಿದ್ದರು.
ತಿರುವನAತಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಪಿಣರಾಯಿ ವಿಜಯನ್, ಕೇಂದ್ರ ಸರಕಾರದ ಸಂಸ್ಥೆಗಳಾದ ಭಾರತೀಯ ಹವಾಮಾನ ಇಲಾಖೆ (ಐಎಂಡಿ), ಭಾರತೀಯ ಭೌಗೋಳಿಕೆ ಸರ್ವೇಕ್ಷಣೆ (ಜಿಎಸ್ಎ) ಅಥವಾ ಕೇಂದ್ರ ಜಲ ಆಯೋಗ (ಸಿಡಬ್ಲ್ಯುಸಿ) ವಯನಾಡ್ನಲ್ಲಿ ಭೂಕುಸಿತ ಸಂಭವಿಸುವ ಬಗ್ಗೆ ಜುಲೈ 30ರ ಮುನ್ನ ಮುನ್ನೆಚ್ಚರಿಕೆ ನೀಡಿಲ್ಲ ಎಂದಿದ್ದಾರೆ.
‘‘ಈ ಪ್ರದೇಶದಲ್ಲಿ ಭಾರತೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿತ್ತು. ಇದರ ಅರ್ಥ 115 ಎಂಎA ಹಾಗೂ 204 ಎಂಎಂ ನಡುವೆ ಮಳೆ ಸುರಿಯಲಿದೆ ಎಂದು. ಆದರೆ, ಭೂಕುಸಿತ ಸಂಭವಿಸುವುದಕ್ಕಿಂತ 48 ಗಂಟೆಗಳಿಗಿಂತ ಮುನ್ನ 572 ಎಂಎಂ ಮಳೆ ಬಿದ್ದಿತ್ತು. ದುರಂತ ಸಂಭವಿಸುವ ಮುನ್ನ ಅವರು ಒಮ್ಮೆ ಕೂಡ ಮುನ್ನೆಚ್ಚರಿಕೆ ನೀಡಿಲ್ಲ. ಭೂಕುಸಿತ ಸಂಭವಿಸಿದ ಬಳಿಕ ಸುಮಾರು 6 ಗಂಟೆಗೆ ಭಾರತೀಯ ಹವಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿತು’’ ಎಂದು ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಅನಂತರ ಜಿಎಸ್ಐ ಹೇಳಿಕೆಯ ಕುರಿತು ಮಾತನಾಡಿದ ಅವರು, ‘‘ಇದು ಕೇಂದ್ರ ಸರಕಾರದ ಸಂಸ್ಥೆ. ಜುಲೈ 29 ಹಾಗೂ 30ರಂದು ಜಿಎಸ್ಐ ಗ್ರೀನ್ ಅಲರ್ಟ್ ನೀಡಿತ್ತು’’ ಎಂದಿದ್ದಾರೆ. ಬಳಿಕ ಕೇಂದ್ರೀಯ ಜಲ ಆಯೋಗದ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿದ ಅವರು, ‘‘ಜುಲೈ 23 ಹಾಗೂ 29ರ ನಡುವೆ ಸಿಡಬ್ಲ್ಯುಸಿ ಇರುವಝಿಂಜಿ ನದಿ ಅಥವಾ ಚಾಲಿಯಾರ್ ನದಿಯಲ್ಲಿ ನೆರೆ ಉಂಟಾಗಲಿದೆ ಎಂದು ಎಚ್ಚರಿಕೆ ನೀಡಿರಲಿಲ್ಲ’’ ಎಂದಿದ್ದಾರೆ.