ವಲಸೆ ಮತ್ತು ವಿದೇಶಿಯರ ಮಸೂದೆ 2025 | ದೇಶವನ್ನು ಅಕ್ರಮವಾಗಿ ಪ್ರವೇಶಿಸಿದರೆ 5 ಲಕ್ಷ ರೂ.ದಂಡ ; 5 ವರ್ಷಗಳವರೆಗೆ ಜೈಲು ಶಿಕ್ಷೆಗೆ ಕೇಂದ್ರದ ಪ್ರಸ್ತಾವ

ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ಮಾನ್ಯವಾದ ಪಾಸ್ಪೋರ್ಟ್ ಅಥವಾ ವೀಸಾ ಇಲ್ಲದೆ ಭಾರತವನ್ನು ಪ್ರವೇಶಿಸುವ ವಿದೇಶಿ ಪ್ರಜೆಗಳು ಶೀಘ್ರವೇ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಐದು ಲ.ರೂ.ವರೆಗೆ ದಂಡವನ್ನು ಎದುರಿಸಬೇಕಾಗಬಹುದು. ನಕಲಿ ಪ್ರಯಾಣ ದಾಖಲೆಗಳ ಮೂಲಕ ಪ್ರವೇಶ,ವಾಸ್ತವ್ಯ ಮತ್ತು ನಿರ್ಗಮನಕ್ಕೆ ಕನಿಷ್ಠ ಎರಡು ವರ್ಷಗಳಿಂದ ಗರಿಷ್ಠ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಒಂದು ಲ.ರೂ.ನಿಂದ 10 ಲ.ರೂ.ವರೆಗೆ ದಂಡವನ್ನು ವಿಧಿಸಲಾಗುವುದು.
ಈ ಕ್ರಮಗಳು ಲೋಕಸಭೆಯಲ್ಲಿ ಮಂಡಿಸಲು ಸಜ್ಜಾಗಿರುವ ವಲಸೆ ಮತ್ತು ವಿದೇಶಿಯರ ಮಸೂದೆ,2025ರ ಭಾಗವಾಗಿವೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.
ಪ್ರಸ್ತಾವಿತ ಕಾನೂನು ವಿದೇಶಿಯರ ಕಾಯ್ದೆ 1946,ಪಾಸ್ಪೋರ್ಟ್ (ಭಾರತದಲ್ಲಿ ಪ್ರವೇಶ) ಕಾಯ್ದೆ 1920,ವಿದೇಶಿಯರ ನೋಂದಣಿ ಕಾಯ್ದೆ 1939 ಮತ್ತು ವಲಸೆ(ವಾಹಕಗಳ ಹೊಣೆಗಾರಿಕೆ) ಕಾಯ್ದೆ 2000;ಈ ನಾಲ್ಕು ಕಾಯ್ದೆಗಳನ್ನು ರದ್ದುಗೊಳಿಸುವ ಮೂಲಕ ಅಸ್ತಿತ್ವದಲ್ಲಿರುವ ವಲಸೆ ಸಂಬಂಧಿತ ಶಾಸನವನ್ನು ಬಲಗೊಳಿಸುವ ಉದ್ದೇಶವನ್ನು ಹೊಂದಿದೆ.
ಶಿಕ್ಷಣ,ವೈದ್ಯಕೀಯ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಮೇಲ್ವಿಚಾರಣೆ ವಿವಿಗಳು,ಆಸ್ಪತ್ರೆಗಳು ಮತ್ತು ವಸತಿ ಸೌಲಭ್ಯಗಳನ್ನು ಹೊಂದಿರುವ ವೈದ್ಯಕೀಯ ಸಂಸ್ಥೆಗಳು ತಮ್ಮಲ್ಲಿ ದಾಖಲಾಗಿರುವ ವಿದೇಶಿ ಪ್ರಜೆಗಳ ವರದಿಯನ್ನು ನಿಯೋಜಿತ ನೋಂದಣಿ ಅಧಿಕಾರಿಗೆ ಸಲ್ಲಿಸುವುದನ್ನು ಅಗತ್ಯವಾಗಿಸುವ ನಿಬಂಧನೆಗಳನ್ನು ಮಸೂದೆಯು ಒಳಗೊಂಡಿದೆ. ಹೆಚ್ಚುವರಿಯಾಗಿ,ವೀಸಾ ಅವಧಿಯನ್ನು ಮೀರಿ ವಾಸವಾಗಿರುವ,ವೀಸಾ ಷರತ್ತುಗಳನ್ನು ಉಲ್ಲಂಘಿಸುವ ಅಥವಾ ನಿರ್ಬಂಧಿತ ಪ್ರದೇಶಗಳನ್ನು ಪ್ರವೇಶಿಸುವ ವಿದೇಶಿಯರು ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ಮೂರು ಲ.ರೂ.ವರೆಗೆ ದಂಡ ಅಥವಾ ಎರಡನ್ನೂ ಎದುರಿಸಬೇಕಾಗಬಹುದು.
ಮಾನ್ಯವಾದ ದಾಖಲೆಗಳನ್ನು ಹೊಂದಿರದ ವ್ಯಕ್ತಿಗಳನ್ನು ಸಾಗಿಸುವ ಸಾರಿಗೆ ನಿರ್ವಾಹಕರನ್ನೂ ಹೊಣೆಯಾಗಿಸಲಾಗುತ್ತದೆ. ವಲಸೆ ಅಧಿಕಾರಿಗಳು ಸಾರಿಗೆ ಸಂಸ್ಥೆಗಳಿಗೆ ಐದು ಲ.ರೂ.ವರೆಗೆ ದಂಡವನ್ನು ವಿಧಿಸುವ ಅಧಿಕಾರವನ್ನು ಹೊಂದಿರಲಿದ್ದಾರೆ. ದಂಡವನ್ನು ಪಾವತಿಸದಿದ್ದರೆ ಅದು ವಿಮಾನವಾಗಿರಲಿ,ಹಡಗಾಗಿರಲಿ ಅಥವಾ ಪ್ರಯಾಣದ ಯಾವುದೇ ವಿಧಾನವಾಗಿರಲಿ, ವಾಹನವನ್ನು ಅಧಿಕಾರಿಗಳು ವಶಪಡಿಸಿಕೊಳ್ಳಬಹುದು.
ಭಾರತದಿಂದ ನಿರ್ಗಮನಕ್ಕೆ ತಡೆ,ಕೆಲವು ಪ್ರದೇಶಗಳಿಗೆ ಪ್ರವೇಶ ನಿಷೇಧ,ಬಯೊಮೆಟ್ರಿಕ್ ನೋಂದಣಿಯ ಅಗತ್ಯ ಅಥವಾ ವ್ಯಕ್ತಿಯ ಸ್ವಂತ ಖರ್ಚಿನಲ್ಲಿ ನಿರ್ಗಮನವನ್ನು ಕಡ್ಡಾಯಗೊಳಿಸುವುದು ಸೇರಿದಂತೆ ನಿರ್ದಿಷ್ಟ ವ್ಯಕ್ತಿಗಳು ಅಥವಾ ಗುಂಪುಗಳ ಮೇಲೆ ನಿರ್ಬಂಧಗಳನ್ನು ಹೇರುವ ಅಧಿಕಾರವನ್ನೂ ಪ್ರಸ್ತಾವಿತ ಶಾಸನವು ಕೇಂದ್ರ ಸರಕಾರಕ್ಕೆ ನೀಡಲಿದೆ.