ಬಿಜೆಪಿಯಿಂದ ದೇಶಾದ್ಯಂತ ಏಕರೂಪದ ನಾಗರಿಕ ನೀತಿ ಸಂಹಿತೆ ಅನುಷ್ಠಾನ : ಅಮಿತ್ ಶಾ
ಅಮಿತ್ ಶಾ | PC : PTI
ಗುನಾ: ದೇಶದಲ್ಲಿ ಧಾರ್ಮಿಕ ವೈಯುಕ್ತಿಕ ಕಾನೂನನನ್ನು ಉಳಿಸಿಕೊಳ್ಳಲಾಗುವುದು ಕಾಂಗ್ರೆಸ್ನ ಚುನಾವಣಾ ಪ್ರಣಾಳಿಕೆಯ ಭರವಸೆಯಾದರೆ, ದೇಶದಲ್ಲಿ ಏಕರೂಪದ ನಾಗರಿಕ ನೀತಿ ಸಂಹಿತೆ ಅನುಷ್ಠಾನಗೊಳಿಸುವುದು ಬಿಜೆಪಿಯ ಭರವಸೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಗ್ಯಾರಂಟಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ಹೇಳಿದ್ದಾರೆ.
ಕಾಂಗ್ರೆಸ್ ಪ್ರಕಾರ ದೇಶದ ಸಂಪನ್ಮೂಲದ ಮೇಲೆ ಮೊದಲ ಹಕ್ಕು ಇರುವುದು ಮುಸ್ಲಿಮರಿಗೆ. ಆದರೆ, ಬಿಜೆಪಿ ಪ್ರಕಾರ ಮೊದಲ ಹಕ್ಕು ಇರುವುದು ಬಡವರು, ದಲಿತರು, ಇತರ ಹಿಂದುಳಿದ ವರ್ಗಗಳು ಹಾಗೂ ಬುಡಕಟ್ಟು ಜನರಿಗೆ ಎಂದು ಅವರು ಹೇಳಿದರು.
ಮಧ್ಯಪ್ರದೇಶದ ಗುನಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಅವರನ್ನು ಬೆಂಬಲಿಸಿ ಇಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಅವರು ಮಾತನಾಡಿದರು.
‘‘ಕಾಂಗ್ರೆಸ್ನ ಪ್ರಣಾಳಿಕೆಯನ್ನು ಜಾಗರೂಕತೆಯಿಂದ ಓದಿ. ವೈಯುಕ್ತಿಕ ಕಾನೂನನ್ನು ಮರು ಪರಿಚಯಿಸಲಾಗುತ್ತಿದೆ ಎಂದು ಅದು ಹೇಳಿದೆ. ಅವರು ಮುಸ್ಲಿಂ ವೈಯುಕ್ತಿಕ ಕಾನೂನನ್ನು ತರಲು ಬಯಸಿದ್ದಾರೆ. ಅವರು ತ್ರಿವಳಿ ತಲಾಖ್ ಅನ್ನು ಮತ್ತೆ ತರಲು ಬಯಸಿದ್ದಾರೆ. ಈ ದೇಶ ಶರಿಯಾದಿಂದ ನಡೆಯಲು ಸಾಧ್ಯವೇ ?’’ ಎಂದು ಅವರು ಪ್ರಶ್ನಿಸಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ರಾಹುಲ್ ಬಾಬಾ, ತುಷ್ಟಿಕರಣಕ್ಕಾಗಿ ನಿಮಗೆ ಏನು ಅನಿಸುತ್ತದೆಯೇ ಅದನ್ನೆಲ್ಲ ಮಾಡಿ. ಎಷ್ಟು ಕಾಲ ಬಿಜೆಪಿ ಇಲ್ಲಿ ಇರುತ್ತದೆಯೋ, ಅಲ್ಲಿವರೆಗೆ ವೈಯುಕ್ತಿಕ ಕಾನೂನನ್ನು ಪರಿಚಯಿಸಬೇಡಿ. ಈ ದೇಶ ಏಕರೂಪದ ನಾಗರಿಕ ನೀತಿ ಸಂಹಿತೆ ಹಾಗೂ ಸಂವಿಧಾನದಿಂದ ನಡೆಯಲಿ. ಇದು ನಮ್ಮ ಸಂವಿಧಾನದ ಚೈತನ್ಯ. ಉತ್ತರಾಖಂಡದಲ್ಲಿ ನಾವು ಏಕರೂಪದ ನಾಗರಿಕ ನೀತಿ ಸಂಹಿತೆಯನ್ನು ಅನುಷ್ಠಾನಗೊಳಿಸಿದ್ದೇವೆ ಎಂದು ಅವರು ಹೇಳಿದರು.
“ವಿಧಿ 370 ಅನ್ನು ರದ್ದುಗೊಳಿಸಿದರೆ, ಕಾಶ್ಮೀರದಾದ್ಯಂತ ರಕ್ತದ ಹೊಳೆ ಹರಿಯಲಿದೆ ಎಂದು ರಾಹುಲ್ ಬಾಬಾ ನನ್ನನ್ನು ಹೆದರಿಸಿದ್ದಾರೆ. ರಾಹುಲ್ ಬಾಬಾ, ಇದು ಕಾಂಗ್ರೆಸ್ ಸರಕಾರ ಅಲ್ಲ. ಇದು ನರೇಂದ್ರ ಮೋದಿ ಸರಕಾರ’’ ಎಂದು ಅಮಿತ್ ಶಾ ಹೇಳಿದರು.