2-3 ದಿನಗಳಲ್ಲಿ ಉಷ್ಣಮಾರುತ ಪರಿಸ್ಥಿತಿಯಲ್ಲಿ ಸುಧಾರಣೆ: ಭಾರತೀಯ ಹವಾಮಾನ ಇಲಾಖೆ
ಹೊಸದಿಲ್ಲಿ: ವಾಯುವ್ಯ, ಮಧ್ಯ ಮತ್ತು ಪೂರ್ವ ಭಾರತದಲ್ಲಿ ನೆಲೆಸಿರುವ ಉಷ್ಣ ಮಾರುತ ಪರಿಸ್ಥಿತಿಯು ಮುಂದಿನ ಎರಡು ದಿನಗಳಲ್ಲಿ ನಿಧಾನವಾಗಿ ಸುಧಾರಿಸುವುದು ಎಂದು ಭಾರತೀಯ ಹವಾಮಾನ ಇಲಾಖೆ ಶನಿವಾರ ತಿಳಿಸಿದೆ.
‘‘ಮುಂದಿನ 2-3 ದಿನಗಳಲ್ಲಿ ವಾಯುವ್ಯ ಮತ್ತು ಪೂರ್ವ ಭಾರತದಲ್ಲಿ ಗರಿಷ್ಠ ಉಷ್ಣತೆಯಲ್ಲಿ 2-3 ಡಿಗ್ರಿ ಸೆಲ್ಸಿಯಸ್ನಷ್ಟು ಇಳಿಕೆಯಾಗುವ ಸಾಧ್ಯತೆಯಿದೆ. ಆ ಬಳಿಕ ಹೆಚ್ಚಿನ ಬದಲಾವಣೆ ಇರುವುದಿಲ್ಲ’’ ಎಂದು ಹವಾಮಾನ ಇಲಾಖೆಯು ತನ್ನ ಹೊಸ ವರದಿಯಲ್ಲಿ ತಿಳಿಸಿದೆ. ‘‘ಮುಂದಿನ ಐದು ದಿನಗಳ ಅವಧಿಯಲ್ಲಿ, ಮಧ್ಯ ಭಾರತದಲ್ಲಿ ಗರಿಷ್ಠ ಉಷ್ಣತೆಯಲ್ಲಿ 2-3 ಡಿಗ್ರಿ ಸೆಲ್ಸಿಯಸ್ನಷ್ಟು ಇಳಿಕೆ ಸಂಭವಿಸುವ ಸಾಧ್ಯತೆಯಿದೆ’’ ಎಂದು ವರದಿ ಹೇಳಿದೆ.
ಪಂಜಾಬ್, ಹರ್ಯಾಣ, ಚಂಡೀಗಢ, ದಿಲ್ಲಿ, ಪಶ್ಚಿಮ ಮತ್ತು ಪೂರ್ವ ಉತ್ತರಪ್ರದೇಶ, ಪಶ್ಚಿಮ ಮತ್ತು ಪೂರ್ವ ರಾಜಸ್ಥಾನ, ಹಿಮಾಚಲಪ್ರದೇಶ, ಬಿಹಾರ, ಜಾರ್ಖಂಡ್, ಹಿಮಾಲಯ ಆವೃತ್ತ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಮ್, ಗಂಗಾನದಿ ತೀರದ ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಉಷ್ಣತೆಯು ನಿಧಾನವಾಗಿ ಕುಸಿಯುವ ಸಾಧ್ಯತೆಯಿದೆ ಎಂದು ಅದು ತಿಳಿಸಿದೆ.
ದೇಶದಲ್ಲಿ ಕಳೆದ ಕೆಲವು ವಾರಗಳಿಂದ ಉಷ್ಣ ಮಾರುತ ಬೀಸುತ್ತಿದೆ. ಮೇ 17ರಿಂದ ಹರ್ಯಾಣ, ಚಂಡೀಗಢ, ದಿಲ್ಲಿ ಮತ್ತು ರಾಜಸ್ಥಾನ ರಾಜ್ಯಗಳನ್ನು ತೀವ್ರ ಉಷ್ಣತೆ ಬಾಧಿಸುತ್ತಿದೆ. ಮೇ 18ರಿಂದ ಮಧ್ಯಪ್ರದೇಶ ಮತ್ತು ಉತ್ತರಪ್ರದೇಶ ರಾಜ್ಯಗಳ ಉಷ್ಣತೆಯಲ್ಲೂ ತೀವ್ರ ಏರಿಕೆಯಾಗಿದೆ.
ಮುಂದಿನ ಎರಡು ದಿನಗಳಲ್ಲಿ ವಾಯುವ್ಯ ಮತ್ತು ಮಧ್ಯ ಭಾರತದ ಗರಿಷ್ಠ ಉಷ್ಣತೆಯು ಹಂತ ಹಂತವಾಗಿ ಎರಡರಿಂದ ಮೂರು ಡಿಗ್ರಿಗಳಷ್ಟು ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆದರೆ, ಆ ಬಳಿಕ ಹೆಚ್ಚಿನ ಬದಲಾವಣೆ ಇರುವುದಿಲ್ಲ ಎಂದು ಅದು ಹೇಳಿದೆ.
ಮುಂದಿನ ಮೂರು ದಿನಗಳಲ್ಲಿ, ಪೂರ್ವ ಭಾರತದ ಗರಿಷ್ಠ ಉಷ್ಣತೆಯಲ್ಲಿ ಮೂರರಿಂದ ನಾಲ್ಕು ಡಿಗ್ರಿಯಷ್ಟು ಕಡಿತವಾಗಬಹುದು, ಆದರೆ, ಆ ಬಳಿಕ ಹೆಚ್ಚಿನ ಬದಲಾವಣೆ ಇರಲಾರದು ಎಂಬುದಾಗಿಯೂ ಹವಾಮಾನ ಇಲಾಖೆ ಹೇಳಿದೆ.
ಮುಂದಿನ ನಾಲ್ಕರಿಂದ ಐದು ದಿನಗಳ ಅವಧಿಯಲ್ಲಿ ಈಶಾನ್ಯ ಭಾರತದಲ್ಲಿ ಭಾರೀ ಮಳೆಯು ಮುಂದುವರಿಯುವ ಸಾಧ್ಯತೆಯಿದೆ ಎಂಬುದಾಗಿಯೂ ಇಲಾಖೆ ತಿಳಿಸಿದೆ.
ಒಡಿಶಾದಲ್ಲಿ, ಕಳೆದ 24 ಗಂಟೆಗಳ ಅವಧಿಯಲ್ಲಿ ತೀವ್ರ ಬಿಸಿಲಿನಿಂದಾಗಿ 26 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.