2023ರಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಪ್ರತಿ ಐವರಲ್ಲಿ ಒಬ್ಬ ಪಾದಚಾರಿ!
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ದೇಶದಲ್ಲಿ ಕಳೆದ ವರ್ಷ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ ಮೃತಪಟ್ಟ ಪ್ರತಿ ಐದು ಮಂದಿಯ ಪೈಕಿ ಒಬ್ಬರು ಪಾದಚಾರಿ ಹಾಗೂ ಶೇಕಡ 45ರಷ್ಟು ಮಂದಿ ದ್ವಿಚಕ್ರವಾಹನ ಸವಾರರು ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಪ್ರಕಟಿಸಿದ್ದಾರೆ. 2023ರಲ್ಲಿ ರಸ್ತೆ ಅಪಘಾತಗಳಲ್ಲಿ ಪಟ್ಟು 1.72 ಲಕ್ಷ ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ 35 ಸಾವಿರ ಮಂದಿ ಪಾದಚಾರಿಗಳು.
ಕಳೆದ ವರ್ಷ ಸುಮಾರು ಐದು ಲಕ್ಷ ಅಪಘಾತ ಪ್ರಕರಣಗಳು ದಾಖಲಾಗಿವೆ. ಮೃತಪಟ್ಟವರಲ್ಲಿ ಸುಮಾರು 10 ಸಾವಿರ ಮಂದಿ 18 ವರ್ಷಕ್ಕಿಂತ ಕೆಳಗಿನವರು ಹಾಗೂ 35 ಸಾವಿರ ಅಪಘಾತಗಳು ರಸ್ತೆ ಮತ್ತು ಕಾಲೇಜುಗಳ ಹೊರಗೆ ಸಂಭವಿಸಿವೆ ಎಂದು ಲಕ್ನೋದಲ್ಲಿ ನಡೆದ ಸಮಾರಂಭವೊಂದರಲ್ಲಿ ಬಹಿರಂಗಪಡಿಸಿದರು.
"ಮೃತಪಟ್ಟವರಲ್ಲಿ ಸುಮಾರು 54 ಸಾವಿರ ಮಂದಿ ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನ ಸವಾರರು. 16 ಸಾವಿರ ಮಂದಿ ಸೀಟ್ಬೆಲ್ಟ್ ಧರಿಸಿರಲಿಲ್ಲ ಹಾಗೂ 12 ಸಾವಿರ ಮಂದಿ ಕಿಕ್ಕಿರಿದು ತುಂಬಿದ್ದ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದವರು. 34 ಸಾವಿರ ಅಪಘಾತಗಳು ಚಾಲನಾ ಲೈಸನ್ಸ್ ಇಲ್ಲದ ಚಾಲಕರಿಂದ ಆಗಿವೆ" ಎಂಬ ವಿವರ ನೀಡಿದರು.
ಈಗಾಗಲೇ ವರದಿಯಾಗಿರುವಂತೆ 2023ರಲ್ಲಿ ಅತ್ಯಧಿಕ ಸಂಖ್ಯೆಯ (1.73 ಲಕ್ಷ) ರಸ್ತೆ ಅಪಘಾತ ಸಾವುಗಳು ಸಂಭವಿಸಿದ್ದು, ಉತ್ತರ ಪ್ರದೇಶ ಅಗ್ರಸ್ಥಾನದಲ್ಲಿದೆ. ಅಪಘಾತ ಸಾವಿನ ಪ್ರಕರಣಗಳಲ್ಲಿ ಮಹಾರಾಷ್ಟ್ರ ಹಾಗೂ ತಮಿಳುನಾಡು ಎರಡು ಹಾಗೂ ಮೂರನೇ ಸ್ತಾನದಲ್ಲಿವೆ.
"ವಿಶ್ವದಲ್ಲೇ ಅತ್ಯಧಿಕ ಸಂಖ್ಯೆಯ ಅಪಘಾತ ಸಾವುಗಳು ಸಂಭವಿಸುತ್ತಿರುವುದು ಭಾರತದಲ್ಲಿ. ಈ ಪೈಕಿ ಗರಿಷ್ಠ ಸಾವುಗಳು ಉತ್ತರ ಪ್ರದೇಶದಲ್ಲಿ ವರದಿಯಾಗಿವೆ. ಉತ್ತರ ಪ್ರದೇಶದಲ್ಲಿ 44 ಸಾವಿರ ರಸ್ತೆ ಅಪಘಾತ ಪ್ರಕರಣಗಳು ವರದಿಯಾಗಿದ್ದು, 23650 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ 1800 ಮಂದಿ 18 ವರ್ಷಕ್ಕಿಂತ ಕೆಳ ವಯಸ್ಸಿನವರು ಮತ್ತು 19 ಸಾವಿರ ಮಂದಿ ಪಾದಚಾರಿ ಹಾಗೂ ದ್ವಿಚಕ್ರ ವಾಹನ ಸವಾರರು. ಅತಿವೇಗದ ಚಾಲನೆಯಿಂಧ 8726 ಮಂದಿ ಉತ್ತರ ಪ್ರದೇಶದಲ್ಲಿ ಮೃತರಾಗಿದ್ದಾರೆ" ಎಂದು ಗಡ್ಕರಿ ವಿವರಿಸಿದ್ದಾರೆ.