2023ರಲ್ಲಿ ಲಕ್ಷದ್ವೀಪಕ್ಕೆ ಅತೀ ಕಡಿಮೆ ವಿಮಾನ ಸಂಚಾರ
ಅಲಾಯನ್ಸ್ ಏರ್ ವಿಮಾನ ಸಂಸ್ಥೆಯಿಂದ ಮಾತ್ರ ಅಗಟ್ಟಿ ದ್ವೀಪಕ್ಕೆ ಹಾರಾಟ
Photo: NDTV
ಹೊಸದಿಲ್ಲಿ : ಪ್ರಧಾನ ನರೇಂದ್ರ ಮೋದಿಯವರ ಇತ್ತೀಚಿನ ಲಕ್ಷದ್ವೀಪ ಭೇಟಿಯು, ಆ ದ್ವೀಪ ಸಮೂಹದ ಬಗ್ಗೆ ಭಾರತೀಯ ಪ್ರವಾಸಿಗರಲ್ಲಿ ಆಸಕ್ತಿಯನ್ನು ಹುಟ್ಟುಹಾಕಿದೆ. ಆದಾಗ್ಯೂ ಕೋವಿಡ್ ಸಾಂಕ್ರಾಮಿಕ ಹಾವಳಿಯ ವರ್ಷವಾದ 2020ನೇ ಇಸವಿಯನ್ನು ಹೊರತುಪಡಿಸಿದರೆ, 2015ರಿಂದೀಚೆಗೆ ಲಕ್ಷದ್ವೀಪಕ್ಕೆ ವಿಮಾನಗಳ ಸಂಚಾರವು ಕಳೆದ ವರ್ಷದಲ್ಲಿ ಅತ್ಯಂತ ಕನಿಷ್ಠವಾಗಿತ್ತೆಂದು ಅಧಿಕೃತ ದತ್ತಾಂಶಗಳು ತಿಳಿಸಿವೆ.
ಲಕ್ಷದ್ವೀಪದ ಅಗಟ್ಟಿ ದ್ವೀಪದಲ್ಲಿರುವ ವಿಮಾನ ನಿಲ್ದಾಣವು 2023ರ ಎಪ್ರಿಲ್-ನವೆಂಬರ್ ತಿಂಗಳ ಅವಧಿಯಲ್ಲಿ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ವಿಮಾನಗಳು ಆಗಮಿಸಿದ್ದು, ಕಳೆದ ಎಂಟು ವರ್ಷಗಳಲ್ಲೇ ಅತ್ಯಂತ ಕನಿಷ್ಠವಾಗಿತ್ತು ಎಂದು ಭಾರತೀಯ ವಿಮಾನನಿಲ್ದಾಣಗಳ ಪ್ರಾಧಿಕಾರದ ದತ್ತಾಂಶಗಳು ತಿಳಿಸಿವೆ. ಈ ಅವಧಿಯಲ್ಲಿ ಅಲ್ಲಿಗೆ 1080 ವಿಮಾನಗಳು ಸಂಚರಿಸಿದ್ದವು. 2022ರ ಎಪ್ರಿಲ್-ನವೆಂಬರ್ ತಿಂಗಳಲ್ಲಿ 1482 ಹಾಗೂ 2021ರ ಎಪ್ರಿಲ್-ನವೆಂಬರ್ನಲ್ಲಿ 1202 ವಿಮಾನಗಳು ಲಕ್ಷದ್ವೀಪಕ್ಕೆ ಪ್ರಯಾಣಿಸಿದ್ದವು. ಕೋವಿಡ್ ಹಾವಳಿಯಿಂದಾಗಿ ಪ್ರಯಾಣ ಹಾಗೂ ಪ್ರವಾಸೋದ್ಯಮವು ಬಾಧಿತವಾಗಿದ್ದ 2020ನೇ ಇಸವಿಯನ್ನು ಹೊರತುಪಡಿಸಿದರೆ ಕಳೆದ ಎಂಟು ವರ್ಷಗಳಲ್ಲಿ ಈ ಪ್ರವೃತ್ತಿಯು ಒಂದೇ ತೆರನಾಗಿತ್ತು ಎಂದು ಅಧಿಕೃತ ದತ್ತಾಂಶಗಳು ತಿಳಿಸಿವೆ.
ಜನವರಿ 2ರಂದು ಪ್ರಧಾನಿ ನರೇಂದ್ರಮೋದಿಯವರು ಲಕ್ಷದ್ವೀಪಕ್ಕೆ ಭೇಟಿ ನೀಡಿದ ಬಗ್ಗೆ ಮಾಲ್ದೀವ್ಸ್ ನ ಕೆಲವು ಸಚಿವರು ಅನುಚಿತವಾದ ಹೇಳಿಕೆಗಳು ವಿವಾದದ ಕಿಡಿಯನ್ನು ಹೊತ್ತಿಸಿದ್ದವು. ಆನಂತರ ಭಾರತದ ಹಲವಾರು ಖ್ಯಾತನಾಮರು, ಗಣ್ಯರು ತಮ್ಮ ಮಾಲ್ದೀವ್ಸ್ ಪ್ರವಾಸವನ್ನು ಬಿಡುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಘೋಷಿಸಿದ್ದರು. ಲಕ್ಷದ್ವೀಪದಲ್ಲಿ ರಜಾದಿನಗಳನ್ನು ಕಳೆಯುವ ಯೋಜನೆಗಳನ್ನು ಪ್ರಕಟಿಸಿದ್ದರು.
ಕೇವಲ ಅಲಾಯನ್ಸ್ ಏರ್ ನ ವಿಮಾನ ಮಾತ್ರವೇ ಅಗಟ್ಟಿ ದ್ವೀಪಕ್ಕೆ ದೈನಂದಿನ ಹಾರಾಟವನ್ನು ನಡೆಸುತ್ತಿದೆ. ಅಗಟ್ಟಿ ದ್ವೀಪವು ಕೇವಲ ಸಣ್ಣ ಗಾತ್ರದ ವಿಮಾನಗಳನ್ನು ಮಾತ್ರವೇ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. 26 ದ್ವೀಪಗಳ ಸಮೂಹವಾದ ಲಕ್ಷದ್ವೀಪದ ಕೇವಲ 10 ದ್ವೀಪಗಳಲ್ಲಿ ಮಾತ್ರವೇ ಜನವಸತಿಯಿದೆ.
ಲಕ್ಷದ್ವೀಪದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಮಿನಿಕಾಯ್ ದ್ವೀಪದಲ್ಲಿ ನೂತನ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರಕಾರ ಚಿಂತಿಸುತ್ತಿದೆ. ಪ್ರಸ್ತಾವಿತ ವಿಮಾನ ನಿಲ್ದಾಣವು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದರ ಜೊತೆಗೆ ರಕ್ಷಣಾ ಪಡೆಗಳ ಕಣ್ಗಾವಲು ಸಾಮರ್ಥ್ಯವನ್ನು ಕೂಡಾ ಹೆಚ್ಚಿಸಲಿದೆ.
ಮೂಲಸೌಕರ್ಯಗಳ ಕೊರತೆ : ಲಕ್ಷದ್ವೀಪ ಭೇಟಿಗೆ ಪ್ರವಾಸಿಗರ ಹಿಂಜರಿಕೆ
ಮೂಲಸೌಕರ್ಯಗಳು, ವಿಮಾನಗಳು ಮಾತ್ರವಲ್ಲದೇ ಹೊಟೇಲ್ ಗಳ ಕೊರತೆಯಿಂದಾಗಿ ಈಗಿರುವ ಪರಿಸ್ಥಿತಿಯಲ್ಲಿ ಪ್ರವಾಸಿಗರನ್ನು ನಿಭಾಯಿಸಲು ಲಕ್ಷದ್ವೀಪಕ್ಕೆ ಸಾಧ್ಯವಿಲ್ಲವೆಂದು ಭಾರತೀಯ ಟ್ರಾವೆಲ್ ಏಜೆಂಟರುಗಳ ಸಂಘದ ಉಪಾಧ್ಯಕ್ಷ ಜಯ್ ಭಾಟಿಯಾ ಹೇಳುತ್ತಾರೆ.
ಲಕ್ಷದ್ವೀಪದ ನಿವಾಸಿಗಳಿಗೆ ವಿಮಾನಗಳು ಹಾಗೂ ನೌಕೆಗಳು ಮಾತ್ರವೇ ನಿಯಮಿತವಾದ ಸಂಚಾರ ಸಾಧನೆಗಳಾಗಿವೆ ಹಾಗೂ ಈವರೆಗೆ ಅನ್ವೇಷಿಸಿರದೇ ಇದ್ದ ದ್ವೀಪಸ್ತೋಮಗಳಿಗೆ ಭೇಟಿನೀಡಲು ಸಾಧ್ಯವಿಲ್ಲವೆಂದು ಅವರು ಹೇಳುತ್ತಾರೆ.
ಆದರೆ ನೇರ ಸಂಪರ್ಕದ ಕೊರತೆ, ಹೊಟೇಲ್ ಗಳು ಹಾಗೂ ಪ್ರವಾಸಿ ಅನಾನುಕೂಲತೆಗಳು, ಲಕ್ಷದ್ವೀಪಕ್ಕೆ ಭೇಟಿ ನೀಡುವುದಕ್ಕೆ ಪ್ರವಾಸಿಗರು ಹಿಂಜರಿಯುವಂತೆ ಮಾಡಿದೆ ಎಂದು ಪ್ರವಾಸೋದ್ಯಮ ಕಂಪೆನಿಗಳ ಅಧಿಕಾರಿಗಳು ತಿಳಿಸುತ್ತಾರೆ.
ಭಾರತೀಯರಿಗೆ ದೇಶಾದ್ಯಂತ ವಿವಿಧ ಬೀಚ್ ತಾಣಗಳಿಗೆ ಹೆಚ್ಚಿನ ಪ್ರಮಾಣದ ನೇರ ಸಂಪರ್ಕ ಸಾಮರ್ಥ್ಯವಿದೆ. ಆದರೆ ಲಕ್ಷದ್ವೀಪವು ಅಂತಹ ಅನುಕೂಲತೆಗಳಿಂದ ವಂಚಿತವಾಗಿದೆಯೆಂದು ಅವರು ಹೇಳುತ್ತಾರೆ.
‘‘ಸೀಮಿತ ವಿಮಾನಗಳ ಕಾರಣದಿಂದಾಗಿ ಲಕ್ಷದ್ವೀಪವನ್ನು ತಲುಪುವ ಸಾಮರ್ಥ್ಯವೂ ಸೀಮಿತವಾಗಿದೆ. ವಿಮಾನ ನಿಲ್ದಾಣದಲ್ಲಿ ವಿಮಾನಗಳನ್ನು ಇಳಿಸಲು ಪ್ರತಿಬಾರಿಯೂ ಅನುಮತಿಯನ್ನು ಪಡೆಯುವುದು ಕೂಡಾ ತ್ರಾಸದಾಯಕವಾದುದಾಗಿದೆ. ಇವುಗಳೆಲ್ಲವೂ ಲಕ್ಷದ್ವೀಪದ ಪ್ರವಾಸೋದ್ಯಮವನ್ನು ನಿರ್ಬಂಧಿಸಿವೆ’’ ಎಂದು ಭಾರತೀಯ ಟ್ರಾವೆಲ್ ಏಜೆಂಟರುಗಳ ಅಸೋಸಿಯೇಶನ್ ನ ಅಧ್ಯಕ್ಷ ಜ್ಯೋತಿ ಮಾಯಾಲ್ ತಿಳಿಸಿದ್ದಾರೆ.
ಈ ದ್ವೀಪ ಸಮೂಹದ ಅಭಿವೃದ್ಧಿಗೆ ಅಗತ್ಯವಿರುವಷ್ಟು ಉತ್ತೇಜನವನ್ನು ನೀಡಲಾಗಿಲ್ಲವೆಂದು ಅವರು ಹೇಳುತ್ತಾರೆ