ಮೊದಲ ಬಾರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಮುಸ್ಲಿಂ ಸಮುದಾಯಕ್ಕಿಲ್ಲ ಪ್ರಾತಿನಿಧ್ಯ
PC : PTI
ಹೊಸದಿಲ್ಲಿ: ಮೊದಲ ಬಾರಿಗೆ ನಿನ್ನೆ ನಡೆದ ಪ್ರಧಾನಿ ಹಾಗೂ ಕೇಂದ್ರ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಯಾವುದೇ ಮುಸ್ಲಿಂ ಸಮುದಾಯದ ಸಂಸದರಿಗೆ ಪ್ರಾತಿನಿಧ್ಯ ದೊರಕಿಲ್ಲ. ನಿರ್ಗಮನ ಸಚಿವ ಸಂಪುಟದಲ್ಲೂ ಯಾವುದೇ ಮುಸ್ಲಿಂ ಸಚಿವರಿರಲಿಲ್ಲ. ಸಚಿವರಾಗಿದ್ದ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ರಾಜ್ಯಸಭೆಗೆ ಮರುಆಯ್ಕೆಯಾಗದೇ ಇದ್ದ ನಂತರ ಮತ್ತೆ ಈ ಸಮುದಾಯದ ಬೇರೆ ಯಾರೂ ಸಚಿವ ಸ್ಥಾನ ಪಡೆದಿಲ್ಲ.
ದೇಶದಲ್ಲಿ ಪ್ರತಿ ಬಾರಿ ನೂತನ ಸರ್ಕಾರ ರಚನೆಯಾದಾಗ ಕನಿಷ್ಠ ಒಬ್ಬ ಮುಸ್ಲಿಂ ಸಂಸದರಿಗೆ ಸಚಿವ ಸ್ಥಾನ ದೊರಕುತ್ತಿತ್ತು.
2014ರಲ್ಲಿ ಪ್ರಧಾನಿಯಾಗಿ ನರೇಂದ್ರ ಮೋದಿ ಮೊದಲ ಬಾರಿಗೆ ಪ್ರಮಾಣವಚನ ಸ್ವೀಕರಿಸಿದಾಗ ನಜ್ಮಾ ಹೆಪ್ತುಲ್ಲಾ ಅವರನ್ನು ಅಲ್ಪಸಂಖ್ಯಾತ ಸಚಿವರನ್ನಾಗಿಸಲಾಗಿದ್ದರೆ 2019ರಲ್ಲಿ ಮುಖ್ತಾರ್ ಅಬ್ಬಾಸ್ ನಖ್ವಿ ಅವರಿಗೂ ಅದೇ ಸಚಿವ ಖಾತೆ ದೊರಕಿತ್ತು.
ಆದರೆ 18ನೇ ಲೋಕಸಭೆಯಲ್ಲಿ ಮುಸ್ಲಿಂ ಸಮುದಾಯದ ಯಾವುದೇ ಅಭ್ಯರ್ಥಿ ಎನ್ಡಿಎ ಇಂದ ಆಯ್ಕೆಯಾಗದೇ ಇರುವುದೇ ಮುಸ್ಲಿಂ ಸಚಿವರಿಲ್ಲದೇ ಇರಲು ಕಾರಣವಾಗಿದೆ.
ಲೋಕಸಭೆಗೆ ಈ ಬಾರಿ ಆಯ್ಕೆಗೊಂಡ 24 ಮುಸ್ಲಿಂ ಸಂಸದರ ಪೈಕಿ 21 ಮಂದಿ ಇಂಡಿಯಾ ಮೈತ್ರಿಕೂಟದವರಾಗಿದ್ದರೆ ಉಳಿದವರಲ್ಲಿ ಎಐಎಂಐಎಂನಿಂದ ಆಯ್ಕೆಯಾದ ಅಸದುದ್ದೀನ್ ಉವೈಸಿ ಹಾಗೂ ಜಮ್ಮು ಕಾಶ್ಮೀರದ ಸ್ವತಂತ್ರ ಅಭ್ಯರ್ಥಿಗಳಾದ ಅಬ್ದುಲ್ ರಶೀದ್ ಶೇಖ್ ಹಾಗೂ ಮುಹಮ್ಮದ್ ಹನೀಫಾ ಆಗಿದ್ದಾರೆ.
2004 ಹಾಗೂ 2009ರಲ್ಲಿ ಕೇಂದ್ರ ಸಚಿವ ಸಂಪುಟದಲ್ಲಿ ಕ್ರಮವಾಗಿ ನಾಲ್ಕು ಮತ್ತು ಐದು ಮಂದಿ ಮುಸ್ಲಿಂ ಸಚಿವರಿದ್ದರು. 1999ರಲ್ಲಿ ವಾಜಪೇಯಿ ಸರ್ಕಾರದಲ್ಲಿ ಶಾನವಾಝ್ ಹುಸೈನ್ ಮತ್ತು ಉಮರ್ ಅಬ್ದುಲ್ಲಾ ಸಚಿವರಾಗಿದ್ದರೆ 1998ರಲ್ಲಿ ವಾಜಪೇಯಿ ಸರ್ಕಾರದಲ್ಲಿ ನಖ್ವಿ ಸಚಿವರಾಗಿದ್ದರು.