ಬಿಹಾರ | ವಿದ್ಯಾರ್ಥಿಗಳ ನಡುವೆ ಘರ್ಷಣೆ : ಓರ್ವ ವಿದ್ಯಾರ್ಥಿಯ ಗುಂಡಿಕ್ಕಿ ಹತ್ಯೆ, ಇಬ್ಬರಿಗೆ ಗಾಯ

Photo credit: NDTV
ಪಾಟ್ನಾ : ಬಿಹಾರದ ರೋಹ್ತಾಸ್ ಜಿಲ್ಲೆಯ ಸಸಾರಾಮ್ನಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷಾ ಹಾಲ್ ನಲ್ಲಿ ನಕಲು ಮಾಡಿದ ವಿಚಾರಕ್ಕೆ ಸಂಬಂಧಿಸಿ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು 10ನೇ ತರಗತಿಯ ವಿದ್ಯಾರ್ಥಿಯೋರ್ವ ಮೃತಪಟ್ಟಿದ್ದಾನೆ ಮತ್ತು ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಸಾರಂನಲ್ಲಿರುವ ಪರೀಕ್ಷಾ ಕೇಂದ್ರದೊಳಗೆ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ನಡೆದ ವಾಗ್ವಾದ ತಾರಕಕ್ಕೇರಿ ಗುಂಡಿನ ದಾಳಿ ನಡೆಸಲಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಗಾಯಗೊಂಡ ವಿದ್ಯಾರ್ಥಿಗಳನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ವರದಿಗಳ ಪ್ರಕಾರ, ಓರ್ವ ವಿದ್ಯಾರ್ಥಿಯ ಕಾಲಿಗೆ ಮತ್ತು ಇನ್ನೋರ್ವ ವಿದ್ಯಾರ್ಥಿಯ ಬೆನ್ನಿಗೆ ಗಾಯವಾಗಿದೆ.
ಘಟನೆಯ ಬೆನ್ನಲ್ಲೇ ಹತ್ಯೆಯಾದ ಬಾಲಕನ ಕುಟುಂಬದ ಸದಸ್ಯರು ಮತ್ತು ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ. ನ್ಯಾಯ ಸಿಗುವವರೆಗೆ ಪ್ರತಿಭಟನೆ ಮುಂದುವರಿಸುವುದಾಗಿ ಹೇಳಿದ್ದು, ಪ್ರತಿಭಟನೆಯಿಂದ ಹಿಂದೆ ಸರಿಯುವಂತೆ ಕುಟುಂಬಸ್ಥರ ಮನವೊಲಿಸಿದ್ದಾರೆ.
ಈ ಕುರಿತು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ಮಾಹಿತಿ ನೀಡಿದ್ದು, ವಿದ್ಯಾರ್ಥಿಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಓರ್ವ ವಿದ್ಯಾರ್ಥಿಯ ಕಾಲಿಗೆ ಮತ್ತು ಇನ್ನೋರ್ವ ವಿದ್ಯಾರ್ಥಿಯ ಬೆನ್ನಿಗೆ ಗುಂಡು ತಗುಲಿದೆ. ಚಿಕಿತ್ಸೆಯ ಸಮಯದಲ್ಲಿ ಓರ್ವ ವಿದ್ಯಾರ್ಥಿ ಮೃತಪಟ್ಟಿದ್ದಾರೆ. ಮೃತ ವಿದ್ಯಾರ್ಥಿಯ ಕುಟುಂಬದ ಸದಸ್ಯರೊಂದಿಗೆ ಗ್ರಾಮಸ್ಥರು ಸೇರಿ ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ. ಅವರನ್ನು ಮನವೊಲಿಸಿ ಮೃತದೇಹದ ಅಂತಿಮ ವಿಧಿವಿಧಾನಗಳಿಗಾಗಿ ಕೊಂಡೊಯ್ದಿದ್ದೇವೆ ಎಂದು ಹೇಳಿದ್ದಾರೆ.