ನನ್ನ ಮೂರನೇ ಅವಧಿಯಲ್ಲಿ ಭಾರತ 3ನೇ ಅತಿ ದೊಡ್ಡ ಆರ್ಥಿಕ ಶಕ್ತಿ
ಸಂಸತ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಪುನರುಚ್ಚಾರ
ನರೇಂದ್ರ ಮೋದಿ | Photo: PTI
ಹೊಸದಿಲ್ಲಿ: ಲೋಕಸಭಾ ಚುನಾವಣೆಗೆ ಮುನ್ನ ಸೋಮವಾರ ಸಂಸತ್ ನಲ್ಲಿ ಮಾಡಿದ ತನ್ನ ಕೊನೆಯ ಭಾಷಣದಲ್ಲಿ, ಭಾರತೀಯ ಆರ್ಥಿಕತೆಯನ್ನು ಮುಂದಕ್ಕೆ ಒಯ್ಯುವ ತನ್ನ ಭರವಸೆಯನ್ನು ಪ್ರಧಾನಿ ನರೇಂದ್ರ ಮೋದಿ ಪುನರುಚ್ಚರಿಸಿದ್ದಾರೆ. ಈ ಬಾರಿ ಯಾವುದೇ ಅಂಕಿಸಂಖ್ಯೆಗಳನ್ನು ನೀಡುವ ಗೋಜಿಗೆ ಹೋಗದ ಅವರು, ಪ್ರಧಾನಿಯಾಗಿ ನನ್ನ ಮೂರನೇ ಅವಧಿಯಲ್ಲಿ ಭಾರತವನ್ನು ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯನ್ನಾಗಿ ಮಾಡುವುದಾಗಿ ಹೇಳಿದ್ದಾರೆ.
ಕಳೆದ ವಾರ ಸಂಸತ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮಾಡಿದ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಮೋದಿ, ಪ್ರತಿಪಕ್ಷದ ನಕಾರಾತ್ಮಕ ಸಂಸ್ಕೃತಿಗಿಂತ ನನ್ನ ಅಭಿವೃದ್ಧಿ ಕಾರ್ಯಸೂಚಿ ಭಿನ್ನವಾಗಿದೆ ಎಂದು ಹೇಳಿದರು.
‘‘ಜಗತ್ತು ಭಾರತದಿಂದ ಪ್ರಭಾವಿತಗೊಂಡಿದೆ. ಇದಕ್ಕೆ ಜಿ20 ಶೃಂಗಸಮ್ಮೇಳನವೇ ಸಾಕ್ಷಿ. ನಮ್ಮ ಮೂರನೇ ಅವಧಿಯಲ್ಲಿ ಭಾರತವು ಜಗತ್ತಿನ ಮೂರನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಲಿದೆ. ಇದು ಮೋದಿಯ ಗ್ಯಾರಂಟಿ’’ ಎಂದು ಪ್ರಧಾನಿ ಹೇಳಿದರು.
‘‘ನಾವು ಮೂರನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗುತ್ತೇವೆ ಎಂದು ನಾವು ಹೇಳುವಾಗ, ಅದು ಅದರಷ್ಟಕ್ಕೇ ಆಗುತ್ತದೆ, ಅದೇನೂ ದೊಡ್ಡ ವಿಷಯವಲ್ಲ ಎಂದು ಹೇಳುತ್ತವೆ. ಅದನ್ನು ಹೇಗೆ ಮಾಡಲಾಗುತ್ತದೆ ಮತ್ತು ಅದರಲ್ಲಿ ಸರಕಾರದ ಪಾತ್ರವೇನು ಎನ್ನುವುದನ್ನು ನಮ್ಮ ಯುವಕರಿಗೆ ನಾನು ಹೇಳಬಯಸುತ್ತೇನೆ’’ ಎಂದು ಅವರು ನುಡಿದರು.
‘‘2014 ಫೆಬ್ರವರಿಯಲ್ಲಿ ಮಧ್ಯಂತರ ಬಜೆಟ್ ಮಂಡನೆಯಾದಾಗ ಅಂದಿನ ಹಣಕಾಸು ಸಚಿವರು ಹೇಳಿದ್ದರು: ‘ನಾನೀಗ ನಮ್ಮ ಭವಿಷ್ಯದ ಬಗ್ಗೆ ಹೇಳ ಬಯಸುತ್ತೇನೆ. ಈಗ ಭಾರತದ ಆರ್ಥಿಕತೆ ಗಾತ್ರ ಮತ್ತು ಬಲದಲ್ಲಿ 11ನೇ ಅತಿ ದೊಡ್ಡ ಆರ್ಥಿಕತೆಯಾಗಿದೆ. ಮುಂದೆ ತುಂಬಾ ವಿಷಯಗಳು ನಮಗಾಗಿ ಕಾದಿವೆ. ಮುಂದಿನ ಮೂರು ದಶಕಗಳಲ್ಲಿ ಭಾರತದ ಜಿಡಿಪಿಯು ಅಮೆರಿಕ ಮತ್ತು ಚೀನಾದ ಬಳಿಕ ಮೂರನೇ ಅತಿ ದೊಡ್ಡ ಜಿಡಿಪಿಯಾಗಲಿದೆ’ ’’ ಎಂದು ಪ್ರಧಾನಿ ಹೇಳಿದರು.
‘‘2044ರಲ್ಲಿ ಭಾರತ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಲಿದೆ ಎಂದು ಅವರು 2014ರಲ್ಲಿ ಹೇಳಿದ್ದರು. ಅದು ಅವರ ಮುನ್ನೋಟವಾಗಿತ್ತು’’ ಎಂದರು.
ನಮ್ಮ ಮೂರನೇ ಅವಧಿಯಲ್ಲಿ ಭಾರತವನ್ನು ಮೂರನೇ ಸ್ಥಾನಕ್ಕೆ ಒಯ್ಯುವ ನನ್ನ ಸರಕಾರದ ಭರವಸೆಯಿಂದ ‘‘ವಿರೋಧ ಪಕ್ಷಗಳಿಗೆ ಸಂತೋಷವಾಗಬೇಕು. ಯಾಕೆಂದರೆ ಅವರು 11ನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದರು’’ ಎಂದು ಅವರು ನುಡಿದರು.
ಮುಖ್ಯಾಂಶಗಳು
► ನಮ್ಮನ್ನು ಉದ್ದೇಶಿಸಿ ಮಾತನಾಡಲು ರಾಷ್ಟ್ರಪತಿ ಈ ನೂತನ ಸಂಸತ್ ಕಟ್ಟಡಕ್ಕೆ ಬಂದಾಗ, ಇಡೀ ಮೆರವಣಿಗೆಯ ನೇತೃತ್ವವನ್ನು ಸೆಂಗೋಲ್ ವಹಿಸಿತ್ತು. ನಾವು ಅದರ ಹಿಂದೆ ನಡೆಯುತ್ತಿದ್ದೆವು. ಭಾರತದ ಸ್ವಾತಂತ್ರ್ಯದ ಆ ಪವಿತ್ರ ಗಳಿಗೆಗೆ ಹೊಸ ಸಂಸತ್ ಕಟ್ಟಡದಲ್ಲಿ ಈ ಹೊಸ ಸಂಪ್ರದಾಯದಲ್ಲಿ ನಾವು ಸಾಕ್ಷಿಯಾದಾಗ, ಪ್ರಜಾಪ್ರಭುತ್ವದ ಗೌರವ ಹೆಚ್ಚಿದೆ.
► ತುಂಬಾ ಸಮಯ ಪ್ರತಿಪಕ್ಷದಲ್ಲೇ ಇರುವ ವಿರೋಧಪಕ್ಷಗಳ ದೃಢ ನಿರ್ಧಾರವನ್ನು ನಾನು ಮೆಚ್ಚುತ್ತೇನೆ. ಹಲವು ದಶಕಗಳ ಕಾಲ ನೀವು ಇಲ್ಲಿ (ಅಧಿಕಾರದಲ್ಲಿ) ಕುಳಿತಂತೆ ಅಲ್ಲಿ (ಪ್ರತಿಪಕ್ಷದಲ್ಲಿ) ಕುಳಿತುಕೊಳ್ಳುವ ನಿರ್ಧಾರವನ್ನೂ ನೀವು ತೆಗೆದುಕೊಂಡಿದ್ದೀರಿ. ಮುಂದಿನ ಚುನಾವಣೆಯಲ್ಲಿ ನೀವು ಇನ್ನಷ್ಟು ಎತ್ತರಕ್ಕೆ ಏರಲಿದ್ದೀರಿ. ನೀವು ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತುಕೊಳ್ಳಲಿದ್ದೀರಿ.
► ಪ್ರತಿಪಕ್ಷ ನಾಯಕರು ಬದಲಾಗಿದ್ದಾರೆ. ಆದರೆ, ಅವರು ಒಂದೇ ವಿಷಯವನ್ನು ಪುನರಾವರ್ತಿಸುತ್ತಿದ್ದಾರೆ. ಇದು ಚುನಾವಣಾ ಸಮಯ. ನೀವು ಸ್ವಲ್ಪ ಕಷ್ಟಪಡಬೇಕಾಗಿತ್ತು. ಏನಾದರೂ ಹೊಸತನ್ನು ತಂದು ಜನರಿಗೆ ಸಂದೇಶವನ್ನು ಕೊಡಬೇಕಾಗಿತ್ತು. ಆದರೆ ನೀವು ದಯನೀಯವಾಗಿ ವಿಫಲರಾಗಿದ್ದೀರಿ. ಪ್ರತಿಪಕ್ಷಗಳ ಈ ಸ್ಥಿತಿಗೆ ಕಾಂಗ್ರೆಸ್ ಪಕ್ಷ ಜವಾಬ್ದಾರಿ. ಉತ್ತಮ ಪ್ರತಿಪಕ್ಷವಾಗುವ ಅವಕಾಶ ಕಾಂಗ್ರೆಸ್ ಗಿತ್ತು. ಆದರೆ ಕಳೆದ 10 ವರ್ಷಗಳಲ್ಲಿ ಆ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ನೀವು ವಿಫಲರಾಗಿದ್ದೀರಿ.