ಮಹಾವಿಕಾಸ್ ಅಘಾಡಿ ಮೈತ್ರಿಕೂಟ ನಮ್ಮನ್ನು ಹೊರಗಿಟ್ಟರೆ ಏಕಾಂಗಿ ಸ್ಪರ್ಧೆ: ಅಖಿಲೇಶ್ ಯಾದವ್ ಘೋಷಣೆ
ರಾಜಕೀಯದಲ್ಲಿ ತ್ಯಾಗಕ್ಕೆ ಜಾಗವಿಲ್ಲ ಎಂದ ಸಮಾಜವಾದಿ ಪಕ್ಷದ ಮುಖ್ಯಸ್ಥ
ಅಖಿಲೇಶ್ ಯಾದವ್ (Photo: PTI)
ಲಕ್ನೊ: ಒಂದು ವೇಳೆ ಮಹಾವಿಕಾಸ್ ಅಘಾಡಿ ಮೈತ್ರಿಕೂಟವೇನಾದರೂ ನಮ್ಮ ಪಕ್ಷವನ್ನು ಹೊರಗಿಟ್ಟರೆ, ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಾಗುವುದು ಎಂದು ರವಿವಾರ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಘೋಷಿಸಿದ್ದಾರೆ.
ಇದೇ ವೇಳೆ, ಮಹಾವಿಕಾಸ್ ಅಘಾಡಿ ಮೈತ್ರಿಕೂಟದ ಗೆಲುವಿನ ಅವಕಾಶಕ್ಕೆ ಹಾನಿಯಾಗದಂತೆ, ನಮ್ಮ ಪಕ್ಷದ ಸಂಘಟನೆ ಎಲ್ಲಿ ಬಲಿಷ್ಠವಾಗಿದೆಯೊ ಅಂತಹ ಕ್ಷೇತ್ರಗಳಲ್ಲಿ ಮಾತ್ರ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದೂ ಅವರು ಭರವಸೆ ನೀಡಿದ್ದಾರೆ.
ಮುಂಬರುವ ಮಹಾರಾಷ್ಟ್ರ ಹಾಗೂ ಜಾರ್ಖಂಡ್ ವಿಧಾನಸಭಾ ಚುನಾವಣೆಗಾಗಿ ಆಗಿರುವ ಸೀಟು ಹಂಚಿಕೆಯ ಬಗ್ಗೆ ಹಲವಾರು ಇಂಡಿಯಾ ಮೈತ್ರಿಕೂಟದ ಅಂಗಪಕ್ಷಗಳು ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡಿವೆ. ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಸಿಪಿಐ(ಎಂಎಲ್) ಹಾಗೂ ಆರ್ಜೆಡಿ ಪಕ್ಷಗಳಿಗೆ ತಲಾ 3-4 ಸೀಟುಗಳನ್ನು ನೀಡಲು ಮುಂದಾಗಿರುವುದಕ್ಕೆ, ಆ ಪಕ್ಷಗಳೂ ಕೂಡಾ ಕಾಂಗ್ರೆಸ್ ವಿರುದ್ಧ ಅಸಮಾಧಾನಗೊಂಡಿವೆ ಎಂದು ಹೇಳಲಾಗಿದೆ.