ಸಿಎಎ: ರಾಜಸ್ಥಾನದಲ್ಲಿ ಸಂಘ ಪರಿವಾರ ಸಂಘಟನೆಯಿಂದ ಪಾಕಿಸ್ತಾನಿ ಹಿಂದೂಗಳಿಗೆ ಅರ್ಹತಾ ಪತ್ರಗಳ ವಿತರಣೆ; ವರದಿ
Photo: thehindu.com
ಜೈಪುರ: ರಾಜಸ್ಥಾನದಲ್ಲಿ ಸಂಘ ಪರಿವಾರಕ್ಕೆ ಸೇರಿದ ಸಂಘಟನೆ ಸೀಮಾಜನ ಕಲ್ಯಾಣ ಸಮಿತಿಯು ಪಾಕಿಸ್ಥಾನದ ಹಿಂದೂ ನಿರಾಶ್ರಿತರಿಗೆ ‘ಅರ್ಹತಾ ಪ್ರಮಾಣಪತ್ರ ’ಗಳನ್ನು ವಿತರಿಸಲು ಶಿಬಿರಗಳನ್ನು ಆಯೋಜಿಸುತ್ತಿದೆ.
ಜೈಸಲ್ಮೇರ್,ಬಾರ್ಮೆರ್ ಮತ್ತು ಜೋಧಪುರ ಜಿಲ್ಲೆಗಳಲ್ಲಿ ವಾಸವಾಗಿರುವ ಇಂತಹ 330 ನಿರಾಶ್ರಿತರು ತಮ್ಮ ಅರ್ಜಿಗಳನ್ನು ಪೌರತ್ವ ಪೋರ್ಟಲ್ನಲ್ಲಿ ಸಲ್ಲಿಸಲು ನೆರವಾಗಿರುವುದಾಗಿ ಸಮಿತಿಯು ಹೇಳಿಕೊಂಡಿದೆ. ಅದು ತನ್ನ ಕೆಲಸವನ್ನು ಸಕ್ರಿಯವಾಗಿ ಪ್ರಚಾರ ಮಾಡುತ್ತಿದೆ ಎಂದು The Hindu ವರದಿ ಮಾಡಿದೆ.
ಸ್ಥಳೀಯ ಪ್ರತಿಷ್ಠಿತ ಸಮುದಾಯ ಸಂಸ್ಥೆ ಅಥವಾ ಸ್ಥಳೀಯ ಅರ್ಚಕರು ನೀಡಬಹುದಾದ ಅರ್ಹತಾ ಪ್ರಮಾಣಪತ್ರವು ವಿವಾದಾತ್ಮಕ ಸಿಎಎ ಅಡಿ ಭಾರತೀಯ ಪೌರತ್ವವನ್ನು ಪಡೆಯಲು ಅರ್ಜಿದಾರರಿಗೆ ಅಗತ್ಯವಿರುವ ಹಲವಾರು ದಾಖಲೆಗಳಲ್ಲಿ ಒಂದಾಗಿದೆ. ಇದು ಅರ್ಜಿದಾರರ ಧರ್ಮವನ್ನು ಮತ್ತು ಅವರು ಧರ್ಮವನ್ನು ಅನುಸರಿಸುವುದನ್ನು ಮುಂದುವರಿಸುತ್ತಾರೆ ಎನ್ನುವುದನ್ನು ದೃಢಪಡಿಸುತ್ತದೆ.
‘ನಮ್ಮ ಪದಾಧಿಕಾರಿಗಳಲ್ಲೋರ್ವರಾಗಿರುವ ತ್ರಿಭುವನ ಸಿಂಗ್ ರಾಥೋಡ್ ಅವರು ಅರ್ಹತಾ ಪತ್ರಗಳಿಗೆ ಸಹಿ ಹಾಕುತ್ತಿದ್ದಾರೆ ’ ಎಂದು ನ್ಯಾಯವಾದಿ ಹಾಗೂ ಸಮಿತಿಯ ಸದಸ್ಯ ವಿಕ್ರಮಸಿಂಗ್ ರಾಜಪುರೋಹಿತ ಅವರು ಸುದ್ದಿಸಂಸ್ಥೆಗೆ ತಿಳಿಸಿದರು. ಸಮುದಾಯ ಆಧಾರಿತ ಸಂಘಟನೆ ಎಂದು ನೋಂದಣಿಯನ್ನು ಹೊಂದಿರುವ ಸೀಮಾಜನ ಕಲ್ಯಾಣ ಸಮಿತಿಯು ಸಿಎಎ ಅಡಿ ಅರ್ಹತಾ ಪ್ರಮಾಣಪತ್ರಗಳನ್ನು ವಿತರಿಸಲು ಅರ್ಹವಾಗಿದೆ ಎಂದರು.
‘2010ಕ್ಕೆ ಮೊದಲು ಭಾರತಕ್ಕೆ ಆಗಮಿಸಿದ್ದ ನೂರಾರು ಜನರು ಇನ್ನಷ್ಟೇ ಪೌರತ್ವವನ್ನು ಪಡೆದುಕೊಳ್ಳಬೇಕಿದೆ. ನಾನು ಭೇಟಿಯಾದ ಮಹಿಳೆಯೋರ್ವಳು 1998ರಲ್ಲಿಯೇ ಇಲ್ಲಿಗೆ ಬಂದಿದ್ದರೂ ಪೌರತ್ವವನ್ನು ಹೊಂದಿಲ್ಲ. ಜೈಪುರವೊಂದರಲ್ಲೇ ಇಂತಹ ಸುಮಾರು ಐದಾರು ಸಾವಿರ ಜನರಿದ್ದಾರೆ’ ಎಂದು ರಾಜಪುರೋಹಿತ ತಿಳಿಸಿದರು.