ರಾಜಸ್ಥಾನ | ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ಮುಸ್ಲಿಂ ವ್ಯಕ್ತಿಗಳ ಬಂಧನ; ಇಡೀ ನೆರೆಹೊರೆಯವರಿಗೆ ‘ಬುಲ್ಡೋಝರ್ ಕಾರ್ಯಾಚರಣೆ’ ನೋಟಿಸ್

ಸಾಂದರ್ಭಿಕ ಚಿತ್ರ (PTI)
ಜೈಪುರ: ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ಮುಸ್ಲಿಂ ವ್ಯಕ್ತಿಗಳನ್ನು ಬಂಧಿಸಿದ ನಂತರ, ಅವರು ವಾಸಿಸುತ್ತಿದ್ದ ಪ್ರದೇಶದ ಇಡೀ ನೆರೆಹೊರೆಯವರಿಗೆ ‘ಬುಲ್ಡೋಝರ್ ಕಾರ್ಯಾಚರಣೆ’ಯ ನೋಟಿಸ್ ನೀಡಿರುವ ಘಟನೆ ರಾಜಸ್ಥಾನದ ಬೀವರ್ ಜಿಲ್ಲೆಯ ವಿಜಯನಗರ ಪಟ್ಟಣದಲ್ಲಿ ನಡೆದಿದೆ ಎಂದು thewire.in ವರದಿ ಮಾಡಿದೆ.
ಐವರು ಅಪ್ರಾಪ್ತೆಯರಿಗೆ ಲೈಂಗಿಕ ದೌರ್ಜನ್ಯ ನೀಡಿ, ಬ್ಲ್ಯಾಕ್ಮೇಲ್ ಮಾಡುತ್ತಿದ್ದರು ಎಂಬ ಆರೋಪದ ಮೇಲೆ ಏಳು ಮಂದಿ ವಯಸ್ಕರು ಮತ್ತು ಮೂವರು ಅಪ್ರಾಪ್ತರನ್ನು ಪೊಲೀಸರು ಫೆಬ್ರವರಿ 16 ರಂದು ಬಂಧಿಸಿದ್ದರು.
ಘಟನೆಯ ಬಳಿಕ ಪ್ರತಿಭಟನೆ ನಡೆಸಿದ ಸಂಘ ಪರಿವಾರದ ಸಂಘಟನೆಗಳು 'ಲವ್ ಜಿಹಾದ್' ಎಂದು ಆರೋಪಿಸಿ, ಆರೋಪಿಗಳ ನಿವಾಸಗಳ ಮೇಲೆ 'ಬುಲ್ಡೋಝರ್ ಕಾರ್ಯಾಚರಣೆ’ ನಡೆಸುವಂತೆ ಒತ್ತಡ ಹೇರಿದ್ದವು. ಆರೆಸ್ಸೆಸ್ ನ ವಿದ್ಯಾರ್ಥಿ ವಿಭಾಗವಾದ ಎಬಿವಿಪಿ ಕೂಡ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಅಜ್ಮೀರ್ನಲ್ಲಿ ಪ್ರತಿಭಟನೆ ನಡೆಸಿತ್ತು.
ಬಂಧನದ ಮೂರು ದಿನಗಳ ನಂತರ, ವಿಜಯ ನಗರ ಪುರಸಭೆಯು 10 ಆರೋಪಿಗಳ ಕುಟುಂಬಗಳಿಗೆ ನೋಟಿಸ್ ನೀಡಲು ಪ್ರಾರಂಭಿಸಿದೆ. ಫೆಬ್ರವರಿ 20 ಮತ್ತು 21 ರಂದು ನೀಡಲಾದ ನೋಟಿಸ್ ಗಳಲ್ಲಿ, ಕುಟುಂಬಗಳು ತಾವು ವಾಸಿಸುತ್ತಿದ್ದ ಮನೆಗಳ ಮಾಲಕತ್ವದ ಪುರಾವೆಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದೆ.
ದಾಖಲೆಗಳನ್ನು ನೀಡದಿದ್ದರೆ, ಪುರಸಭೆಯು ಅಕ್ರಮ ನಿರ್ಮಾಣಗಳು/ಅತಿಕ್ರಮಣಗಳನ್ನು ಕೆಡಹುವ ಕಾರ್ಯಚರಣೆ ಕೈಗೊಳ್ಳುತ್ತದೆ. ಅದಕ್ಕೆ ತಗಲುವ ಎಲ್ಲಾ ವೆಚ್ಚಗಳನ್ನು ಆರೋಪಿಗಳ ಕುಟುಂಬಗಳಿಂದ ವಸೂಲಿ ಮಾಡಲಾಗುತ್ತದೆ ಎಂದು ನೋಟಿಸ್ಗಳಲ್ಲಿ ತಿಳಿಸಲಾಗಿದೆ.
ಅಲ್ಲದೇ, ಫೆಬ್ರವರಿ 20 ರಂದು, ಪಟ್ಟಣದ ರಾಜನಗರ ಪ್ರದೇಶದಲ್ಲಿರುವ ಜಾಮಾ ಮಸೀದಿಯ ಆಡಳಿತಕ್ಕೆ ಮೂರು ದಿನಗಳ ಅವಧಿಯೊಳಗೆ ಮಸೀದಿಯ ಮಾಲಕತ್ವದ ಪುರಾವೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸುವಂತೆಯೂ ನೋಟಿಸ್ ನೀಡಲಾಗಿದೆ.
"ಇಲ್ಲದಿದ್ದರೆ, ನಿಗದಿತ ಸಮಯದ ನಂತರ, ರಾಜಸ್ಥಾನ ಪುರಸಭೆ ಕಾಯ್ದೆ, 2009 ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು, ಅದಕ್ಕೆ ನೀವೇ ಜವಾಬ್ದಾರರಾಗಿರುತ್ತೀರಿ" ಎಂದು ಮಸೀದಿಗೆ ನೀಡಲಾದ ನೋಟಿಸ್ನಲ್ಲಿ ಹಿಂದಿಯಲ್ಲಿ ಬರೆಯಲಾಗಿದೆ.
ಪುರಸಭೆಯ ನಡೆಯನ್ನು ಖಂಡಿಸಿರುವ ಸಾಮಾಜಿಕ ಹೋರಾಟಗಾರರು, ಯಾವುದೇ ಧ್ವಂಸ ಕಾರ್ಯಾಚರಣೆಯು ಸುಪ್ರೀಂ ಕೋರ್ಟ್ನ ಮಾರ್ಗಸೂಚಿಗಳ ಸ್ಪಷ್ಟ ಉಲ್ಲಂಘನೆಯಾಗುತ್ತದೆ ಎಂದು ಹೇಳಿದ್ದಾರೆ.
ಆರೋಪಿಗಳು ಮತ್ತು ಸಂತ್ರಸ್ತೆಯರು ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕ ಸಾಧಿಸಿದ್ದರು. ನಂತರ ಫೋನ್ ಸಂಖ್ಯೆಗಳನ್ನು ವಿನಿಮಯ ಮಾಡಿಕೊಂಡಿದ್ದರು. ಬಳಿಕ ಕೆಲವು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಬ್ಲ್ಯಾಕ್ಮೇಲ್ ಮಾಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
“ಪ್ರಕರಣದಲ್ಲಿ ಏಳು ಜನ ವಯಸ್ಕರು, ಮೂವರು ಅಪ್ರಾಪ್ತ ವಯಸ್ಕ ಆರೋಪಿಗಳನ್ನು ಬಂಧಿಸಲಾಗಿದೆ. ಎಲ್ಲಾ ಆರೋಪಿಗಳು 19-21 ವರ್ಷ ವಯಸ್ಸಿನವರು. ಐವರು ಸಂತ್ರಸ್ತೆಯರು ಮೂರು ಎಫ್ಐಆರ್ಗಳನ್ನು ದಾಖಲಿಸಿದ್ದಾರೆ. ಸಂತ್ರಸ್ತೆಯರ ಪೈಕಿ ಒಬ್ಬಳ ಕುಟುಂಬ ಸದಸ್ಯರು ಆಕೆಯು ಮೊಬೈಲ್ ಫೋನ್ನಲ್ಲಿ ಮಾತನಾಡುತ್ತಿರುವುದನ್ನು ನೋಡಿ ಪ್ರಶ್ನಿಸಿದ ಬಳಿಕ ಘಟನೆ ಬೆಳಕಿಗೆ ಬಂದಿದೆ” ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಸಜ್ಜನ್ ಸಿಂಗ್ ಹೇಳಿದರುl.
ಪೊಕ್ಸೊ ಕಾಯ್ದೆ, ಬಿಎನ್ಎಸ್ ಅಡಿಯಲ್ಲಿ ಎಫ್ಐಆರ್ಗಳನ್ನು ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಆರೋಪಿಗಳು ಸಂತ್ರಸ್ತೆಯರನ್ನು ಮತಾಂತರವಾಗುವಂತೆ ಒತ್ತಡ ಹೇರಿದ್ದರೇ? ಎಂಬ ಆರೋಪದ ಬಗ್ಗೆ ಕೇಳಿದಾಗ, ಡಿಎಸ್ಪಿ ಸಜ್ಜನ್ ಸಿಂಗ್ ಅವರು ಈ ಅಂಶದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪ್ರತಿಕ್ರಿಯಿಸಿದರು.
ಆರೋಪಿಗಳ ಬಂಧನದ ಮೂರು ದಿನಗಳ ನಂತರ, ಫೆಬ್ರವರಿ 20 ರಂದು, ಪುರಸಭೆಯು ಮಸೀದಿ ಮತ್ತು ಸ್ಮಶಾನದೊಂದಿಗೆ ಆರೋಪಿಗಳ ಕುಟುಂಬಗಳಿಗೆ ನೋಟಿಸ್ಗಳನ್ನು ನೀಡಿದೆ.
“ನಾವು ಪೊಲೀಸರೊಂದಿಗೆ ಸಂಪೂರ್ಣವಾಗಿ ಸಹಕರಿಸಿದ್ದೇವೆ ಮತ್ತು ನಮ್ಮ ಸಹೋದರನನ್ನು ಅಧಿಕಾರಿಗಳ ಮುಂದೆ ಹಾಜರುಪಡಿಸಿದ್ದೇವೆ. ಆತ ನಿರಪರಾಧಿಯೋ ಅಥವಾ ತಪ್ಪಿತಸ್ಥನೋ ಎಂಬುದನ್ನು ಕಾನೂನು ಮತ್ತು ನ್ಯಾಯಾಲಯ ನಿರ್ಧರಿಸಬೇಕು. ಆದರೆ ನಮ್ಮ ಮನೆಗಳನ್ನು ಗುರಿಯಾಗಿಸಲಾಗುತ್ತಿರುವುದು ಅನ್ಯಾಯ. ನಮ್ಮಲ್ಲಿ ಎಲ್ಲಾ ಅಗತ್ಯ ದಾಖಲೆಗಳಿವೆ ಮತ್ತು ಅವುಗಳನ್ನು ಅಧಿಕಾರಿಗಳ ಮುಂದೆ ಸಲ್ಲಿಸುತ್ತಿದ್ದೇವೆ. ನಮ್ಮನ್ನು ಅನ್ಯಾಯವಾಗಿ ಗುರಿಯಾಗಿಸಿಕೊಂಡು ಧ್ವಂಸ ಮಾಡುತ್ತಾರೋ ಎಂಬ ಭಯ ಆವರಿಸಿದೆ. ನಾವು ಯಾವುದೇ ಅಪರಾಧ ಮಾಡಿಲ್ಲ, ”ಎಂದು ಮೆಕ್ಯಾನಿಕ್ ಆಗಿ ಕೆಲಸ ಮಾಡುವ ಆರೋಪಿಗಳ ಪೈಕಿ ಒಬ್ಬನ ಸಹೋದರ the wire ಗೆ ತಿಳಿಸಿದರು.
ಬಂಧನದ ಬಳಿಕ ಆರೋಪಿಗಳನ್ನು ಅಜ್ಮೀರ್ ನ್ಯಾಯಾಲಯಕ್ಕೆ ಹಾಜರುಪಡಿಸುವಾಗ ಸ್ಥಳೀಯ ವಕೀಲರು ಆರೋಪಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
“ವಿಜಯ್ ನಗರದಲ್ಲಿ ಕೋಮು ಸಾಮರಸ್ಯಕ್ಕೆ ಇಂತಹ ಭಂಗ ತರುವುದನ್ನು ನಾವು ಎಂದೂ ನೋಡಿಲ್ಲ. ಮುಸ್ಲಿಂ ಸಮುದಾಯದ ಯಾವುದೇ ಸದಸ್ಯರು ಆರೋಪಿಗಳ ಪರವಾಗಿ ನಿಂತಿಲ್ಲ ಮತ್ತು ನಾವು ಅಪರಾಧವನ್ನು ಖಂಡಿಸಿದ್ದೇವೆ. ಆದರೆ ಸರಕಾರವು ಹಿಂದುತ್ವ ಗುಂಪುಗಳಿಗೆ ಮಣಿದು ಒತ್ತಡದಲ್ಲಿದೆ. ಬುಲ್ಡೋಝರ್ ಕಾರ್ಯಾಚರಣೆ ನೋಟಿಸ್ಗಳನ್ನು ನೀಡಲಾಗುತ್ತಿದೆ. 100 ವರ್ಷ ಹಳೆಯ ಮಸೀದಿಯ ಮಾಲೀಕತ್ವದ ಪುರಾವೆ ಕೇಳುವ ಉದ್ದೇಶವೇನು? ಉದ್ದೇಶಪೂರ್ವಕವಾಗಿ ಅಪರಾಧಕ್ಕೆ ಧಾರ್ಮಿಕ ಬಣ್ಣ ನೀಡಲಾಗುತ್ತಿದೆ, ”ಎಂದು ವಿಜಯ ನಗರದ ಸ್ಥಳೀಯ ಮುಸ್ಲಿಂ ಸಮುದಾಯದ ಸದಸ್ಯ ಸರ್ಕಾರಿ ಶಾಲಾ ಶಿಕ್ಷಕ ಅಖತ್ಯಾರ್ ಅಲಿ ಹೇಳಿದರು.
ಘಟನೆಯ ನಂತರ ಮಸೀದಿಯ ಜೊತೆಗೆ ಸ್ಥಳೀಯ ಸ್ಮಶಾನಕ್ಕೂ ನೋಟಿಸ್ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ನಾವು ಆರೋಪಿಗಳ ಕುಟುಂಬಗಳಿಗೆ, ಜಾಮಾ ಮಸೀದಿ ಮತ್ತು ಸ್ಥಳೀಯ ಸ್ಮಶಾನಕ್ಕೆ ನೋಟಿಸ್ ಕಳುಹಿಸಿದ್ದೇವೆ, ಅವುಗಳನ್ನು ಅಕ್ರಮವಾಗಿ ನಿರ್ಮಿಸಲಾಗಿದೆಯೇ ಎಂದು ಪರಿಶೀಲಿಸಲು ಮಾಲೀಕತ್ವದ ಪುರಾವೆಗಳನ್ನು ಒದಗಿಸುವಂತೆ ಕೇಳಿದ್ದೇವೆ. ದಾಖಲೆಗಳನ್ನು ಪರಿಶೀಲಿಸಿದ ನಂತರ ಕೆಡವುವ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗುವುದು, ”ಎಂದು ವಿಜಯ ನಗರ ಪುರಸಭೆಯ ಕಾರ್ಯನಿರ್ವಾಹಕ ಅಧಿಕಾರಿ (ಇಒ) ಪ್ರತಾಪ್ ಸಿಂಗ್ the wire ಗೆ ತಿಳಿಸಿದರು.
ಆರೋಪಿಗಳು ಸಂತ್ರಸ್ತೆಯರನ್ನು ಭೇಟಿಯಾಗಿದ್ದರು ಎನ್ನಲಾದ ಸ್ಥಳೀಯ ಕೆಫೆಯನ್ನೂ ಪುರಸಭೆ ವಶಪಡಿಸಿಕೊಂಡಿದೆ. ಅದರ ಸುತ್ತಲಿನ ಅತಿಕ್ರಮಣಗಳನ್ನು ಈಗಾಗಲೇ ಕೆಡವಲಾಗಿದೆ ಎಂದು ಅವರು ಹೇಳಿದರು.
“ಬೀವರ್ ಜಿಲ್ಲೆಯ ವಿಜಯನಗರ ಪಟ್ಟಣದಲ್ಲಿ ಸಂಭಾವ್ಯ ಬುಲ್ಡೋಝರ್ರ್ ಕಾರ್ಯಾಚರಣೆಯನ್ನು ತಕ್ಷಣವೇ ನಿಲ್ಲಿಸಬೇಕೆಂದು ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್) ಒತ್ತಾಯಿಸುತ್ತದೆ. ಬ್ಲಾಕ್ಮೇಲ್ ಘಟನೆಯ ನಂತರ, ಪುರಸಭೆಯು ಆರೋಪಿಗಳು ಮತ್ತು ಅವರ ಕೆಲವು ಕುಟುಂಬ ಸದಸ್ಯರು ಹಾಗೂ ಮಸೀದಿಗೆ ಅತಿಕ್ರಮಣಕ್ಕೆ ಸಂಬಂಧಿಸಿದಂತೆ 10 ನೋಟಿಸ್ಗಳನ್ನು ನೀಡಿದೆ” ಎಂದು ಪಿಯುಸಿಎಲ್ ರಾಷ್ಟ್ರೀಯ ಅಧ್ಯಕ್ಷೆ ಕವಿತಾ ಶ್ರೀವಾಸ್ತವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
“ಈ ನೋಟಿಸ್ಗಳ ಹಠಾತ್ ಪ್ರಕಟಣೆಯು ಸರಕಾರದ ಉದ್ದೇಶಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಸುಪ್ರೀಂ ಕೋರ್ಟ್ ನವೆಂಬರ್ 13, 2024 ರಂದು ನೀಡಿದ ಆದೇಶದಲ್ಲಿ ಸ್ಪಷ್ಟ ನಿರ್ದೇಶನಗಳನ್ನು ನೀಡಿದ್ದರೂ, ಬುಲ್ಡೋಝರ್ ಕಾರ್ಯಾಚರಣೆ ನಡೆಯುವ ಭಯವಿದೆ. ಘಟನೆಯನ್ನು ಕೋಮುವಾದೀಕರಣಗೊಳಿಸಲು ಪ್ರಯತ್ನಗಳು ನಡೆಯುತ್ತಿವೆ” ಎಂದು ಶ್ರೀವಾಸ್ತವ ಹೇಳಿದರು.