ಯಮುನಾ ನದಿಯಲ್ಲಿ ಅಮೋನಿಯಾ ಮಟ್ಟ ಹೆಚ್ಚಿಸಲು ಬಿಜೆಪಿ ನೇತೃತ್ವದ ಹರ್ಯಾಣ ಸರ್ಕಾರ ಪಿತೂರಿ ನಡೆಸಿದೆ : ಅರವಿಂದ್ ಕೇಜ್ರಿವಾಲ್

ಅರವಿಂದ್ ಕೇಜ್ರಿವಾಲ್ (PTI)
ಹೊಸದಿಲ್ಲಿ : ಬಿಜೆಪಿ ನೇತೃತ್ವದ ಹರ್ಯಾಣ ಸರ್ಕಾರ ಯಮುನಾ ನದಿಯಲ್ಲಿ ಅಮೋನಿಯಾ ಮಟ್ಟವನ್ನು ಹೆಚ್ಚಿಸಲು ಪಿತೂರಿ ನಡೆಸಿದೆ ದಿಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.
ಯಮುನಾ ನದಿಗೆ ವಿಷ ಬೆರೆಸಲಾಗಿದೆ ಎಂಬ ತಮ್ಮ ಆರೋಪದ ಕುರಿತು ಚುನಾವಣಾ ಆಯೋಗ ನೀಡಿರುವ ನೋಟಿಸ್ ಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ಕಚೇರಿಗೆ ಭೇಟಿ ನೀಡಿರುವ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, ತಮ್ಮ ಆರೋಪದ ಕುರಿತು ವಿವರಣೆ ನೀಡಿದ್ದಾರೆ.
ಚುನಾವಣಾ ಆಯೋಗದ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೇಜ್ರಿವಾಲ್ ಗೆ ದಿಲ್ಲಿ ಮುಖ್ಯಮಂತ್ರಿ ಆತಿಶಿ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಸಾಥ್ ನೀಡಿದ್ದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕೇಜ್ರಿವಾಲ್, ಜನವರಿ 26-27ರಿಂದ ಯಮುನಾ ನದಿಯಲ್ಲಿ 7 ಪಿಪಿಎಂ ಇದ್ದ ಅಮೋನಿಯಾ ಮಟ್ಟವು ನಮ್ಮ ಯಶಸ್ವಿ ಹೋರಾಟದಿಂದ ಈಗ 2.1 ಪಿಪಿಎಂಗೆ ಇಳಿದಿದೆ. ಬಿಜೆಪಿ ನೇತೃತ್ವದ ಹರ್ಯಾಣ ಸರ್ಕಾರವು ಯಮುನಾ ನದಿಯಲ್ಲಿ ಅಮೋನಿಯಾ ಮಟ್ಟವನ್ನು ಹೆಚ್ಚಿಸಲು ಪಿತೂರಿ ನಡೆಸಿದೆ ಎಂಬುದು ಸ್ಪಷ್ಟವಾಗಿದೆ. ಯಮುನಾದಲ್ಲಿ ಅಮೋನಿಯಾ ಮಟ್ಟವು ಹೆಚ್ಚಾಗುವುದನ್ನು ಡಿಸೆಂಬರ್ ನಲ್ಲಿಯೇ ಆತಿಶಿ ಗಮನಿಸಿದ್ದರು. ಅವರು ಮತ್ತು ಪಂಜಾಬ್ ಮುಖ್ಯಮಂತ್ರಿ ಜೊತೆ ಸೇರಿ ಪರಿಸ್ಥಿತಿಯನ್ನು ನಿಭಾಯಿಸಲು ಹಲವಾರು ಪ್ರಯತ್ನಗಳನ್ನು ಮಾಡಿದರು ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಯಮುನಾ ನೀರಿನಲ್ಲಿ ಹೆಚ್ಚಿನ ಅಮೋನಿಯಾ ಮಟ್ಟವನ್ನು ದಿಲ್ಲಿ ಜಲ ಮಂಡಳಿ (ಡಿಜೆಬಿ) ಮತ್ತು ಇತರ ಅಧಿಕಾರಿಗಳು ಪತ್ತೆ ಮಾಡಿದ್ದಾರೆ ಎಂದು ಚುನಾವಣಾ ಆಯೋಗಕ್ಕೆ ನೀಡಿದ ಪ್ರತಿಕ್ರಿಯೆಯಲ್ಲಿ ಕೇಜ್ರಿವಾಲ್ ಉಲ್ಲೇಖಿಸಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ಕೇಜ್ರಿವಾಲ್, ಪ್ರಸ್ತುತ ಅಧಿಕಾರಾವಧಿಯಲ್ಲಿ ಅವರ ನಡವಳಿಕೆಯು ಈ ಸಂಸ್ಥೆಯ ಮೇಲಿನ ಜನರ ನಂಬಿಕೆಯನ್ನು ಸಂಪೂರ್ಣವಾಗಿ ಕಳೆದುಕೊಳ್ಳುವಂತೆ ಮಾಡಿದೆ ಎಂದು ಹೇಳಿದ್ದಾರೆ.