ಪ್ರಕರಣಗಳ ತನಿಖೆಗೆ ರಾಜ್ಯಗಳಿಗೆ ಸಿಬಿಐ ಅನ್ನು ತಾನು ಕಳುಹಿಸುತ್ತಿರುವುದನ್ನು ಸುಪ್ರೀಂ ಕೋರ್ಟಿನಲ್ಲಿ ಒಪ್ಪಿಕೊಂಡ ಕೇಂದ್ರ
ಸಿಬಿಐ ಮೇಲೆ ತನಗೆ ನಿಯಂತ್ರಣವಿಲ್ಲ ಎಂಬ ಕೇಂದ್ರದ ವಾದವನ್ನು ಒಪ್ಪಿಕೊಳ್ಳಲು ನ್ಯಾಯಾಲಯ ನಿರಾಕರಣೆ
ಹೊಸದಿಲ್ಲಿ: ಸಿಬಿಐ ಮೇಲೆ ತನಗೆ ನಿಯಂತ್ರಣವಿಲ್ಲ ಎಂಬ ಕೇಂದ್ರದ ವಾದವನ್ನು ಬುಧವಾರ ಒಪ್ಪಿಕೊಳ್ಳಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ ಎಂದು thehindu.com ವರದಿ ಮಾಡಿದೆ.
ಕೇಂದ್ರ ಸರ್ಕಾರವಲ್ಲದೇ ಇದ್ದರೆ ಪ್ರಕರಣಗಳ ತನಿಖೆಗೆ ರಾಜ್ಯಗಳಿಗೆ ಈ ತನಿಖಾ ಏಜನ್ಸಿಯನ್ನು ಬೇರೆ ಯಾರು ಕಳುಹಿಸುತ್ತಾರೆ ಎಂದು ನ್ಯಾಯಮೂರ್ತಿ ಬಿ ಆರ್ ಗವಾಯಿ ನೇತೃತ್ವದ ದ್ವಿಸದಸ್ಯ ಪೀಠದ ಸದಸ್ಯರಾಗಿರುವ ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಪ್ರಶ್ನಿಸಿದಾಗ ಕೇಂದ್ರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ “ ಕೇಂದ್ರ ಸರ್ಕಾರ” ಎಂದು ಉತ್ತರಿಸಿಬಿಟ್ಟರು. ಇದಕ್ಕೂ ಮೊದಲು ಅವರು ನ್ಯಾಯಾಲಯದಲ್ಲಿ ಅನೇಕ ಬಾರಿ ಕೇಂದ್ರಕ್ಕೂ ಸಿಬಿಐ ತನಿಖೆಗಳಿಗೂ ಸಂಬಂಧವಿಲ್ಲ ಎಂಬಂತಹ ಉತ್ತರ ನೀಡಿದ್ದರು.
ರಾಜ್ಯದಲ್ಲಿನ ಪ್ರಕರಣಗಳಿಗೆ ಸಂಬಂಧಿಸಿದಂತೆ ಏಕಪಕ್ಷೀಯವಾಗಿ ಸಿಬಿಐ ತನಿಖೆಗೆ ಆದೇಶಿಸಿ ಕೇಂದ್ರ ಸರ್ಕಾರವು ಹಸ್ತಕ್ಷೇಪ ನಡೆಸುತ್ತಿದೆ ಎಂದು ಸಂವಿಧಾನದ ವಿಧಿ 131 ಅನ್ವಯ ಪಶ್ಚಿಮ ಬಂಗಾಳ ಸರ್ಕಾರ ದಾಖಲಿಸಿದ ಅರ್ಜಿಯ ವಿಚಾರಣೆ ನಡೆಸುವ ವೇಳೆ ಈ ಬೆಳವಣಿಗೆ ನಡೆದಿದೆ.
ದಿಲ್ಲಿ ವಿಶೇಷ ಪೊಲೀಸ್ ಎಸ್ಟಾಬ್ಲಿಶ್ಮೆಂಟ್ ಕಾಯಿದೆ, 1946 ಇದರ ಸೆಕ್ಷನ್ 6 ಅನ್ವಯ ಸಿಬಿಐ ತನಿಖೆಗೆ ಸಾಮಾನ್ಯ ಅನುಮತಿಯನ್ನು ರಾಜ್ಯ ನವೆಂಬರ್ 2018ರಲ್ಲಿಯೇ ವಾಪಸ್ ಪಡೆದಿರುವ ಹೊರತಾಗಿಯೂ ಕೇಂದ್ರ ಸರ್ಕಾರ ಸಿಬಿಐ ತನಿಖೆಗೆ ಆದೇಶಿಸುತ್ತಿದೆ ಎಂದು ರಾಜ್ಯ ವಾದಿಸಿತ್ತು.
ಆದರೆ ಈ ಅರ್ಜಿಯನ್ನು ವಜಾಗೊಳಿಸಬೇಕೆಂದು ಹಾಗೂ ಕೇಂದ್ರವನ್ನು ಪ್ರತಿವಾದಿಯೆಂದು ತಪ್ಪಾಗಿ ಉಲ್ಲೇಖಿಸಿದೆ ಎಂದು ಸಾಲಿಸಿಟರ್ ಜನರಲ್ ಹೇಳಿದ್ದರಲ್ಲದೆ ಸಿಬಿಐ ಅನ್ನು ಕೇಂದ್ರದ ಪೊಲೀಶ್ ಪಡೆ ಎಂದು ಅರ್ಜಿಯಲ್ಲಿ ಹೇಳಿರುವುದು ಸರಿಯಲ್ಲ, ಸಿಬಿಐ ತನಿಖೆಗೆ ಸಂಬಂಧಿಸಿದಂತೆ ಕೇಂದ್ರದ ಯಾವುದೇ ಪಾತ್ರವಿಲ್ಲ ಎಂದು ಅವರು ವಾದಿಸಿದ್ದರು.
ಪಶ್ಚಿಮ ಬಂಗಾಳ ಸರ್ಕಾರದ ಅರ್ಜಿಯ ಕುರಿತಂತೆ ತೀರ್ಪನ್ನು ನ್ಯಾಯಾಲಯ ಕಾಯ್ದಿರಿಸಿದೆ.
ಕಾನೂನು ಸುವ್ಯವಸ್ಥೆ ರಾಜ್ಯಗಳಿಗೆ ಸಂಬಂಧಿಸಿದ ವಿಚಾರ ಎಂದು ಮೇ 2ರಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿತ್ತು.
“ಕೇಂದ್ರದ ಉದ್ದೇಶವೇನೆಂದರೆ ರಾಜ್ಯಗಳಿಗೆ ಸಿಬಿಐ ಮೂಲಕ ಪ್ರವೇಶಿಸಿ ನಂತರ ಇಡಿ ಬಳಸಿ ಬೇಕಿದ್ದಂತೆ ಮಾಡುವುದಾಗಿದೆ. ಇದು ಗಂಭೀರ ಪರಿಣಾಮಗಳನ್ನುಂಟು ಮಾಡುತ್ತದೆ,” ಎಂದು ಪ ಬಂಗಾಳ ಸರ್ಕಾರದ ಪರ ವಕೀಲರಾದ ಕಪಿಲ್ ಸಿಬಲ್ ಹೇಳಿದ್ದರು.