ಮೂರನೆ ಅವಧಿಯಲ್ಲಿ ಮನಸೋ ಇಚ್ಛೆ ನಡೆದುಕೊಳ್ಳಲಾರದ ಸ್ಥಿತಿಗೆ ತಲುಪಿದ ಬಹುಮತವಿಲ್ಲದ ಮೋದಿ ಸರಕಾರ!
ನರೇಂದ್ರ ಮೋದಿ | PC : PTI
ಹೊಸದಿಲ್ಲಿ : ವಕ್ಫ್ ತಿದ್ದುಪಡಿ ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಗೆ ಕಳಿಸಲು ಒಪ್ಪಿದ ಬೆನ್ನಿಗೇ ಮೋದಿ ಮೈತ್ರಿ ಸರಕಾರ ಇನ್ನೊಂದು ಹೊಸ ಮಸೂದೆಯ ಕರಡನ್ನು ವಾಪಸ್ ಪಡೆದಿದೆ. ತನಗೆ ಬೇಕಾದಂತೆ ಮಸೂದೆಗಳನ್ನು ರೂಪಿಸಿ ಅಂಗೀಕಾರ ಪಡೆದು ಕಾನೂನು ತರುತ್ತಿದ್ದ ಮೋದಿ ಸರ್ಕಾರ ಈಗ ಹಾಗೆ ಮಾಡಲಾಗುತ್ತಿಲ್ಲ ಎಂಬುದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಮಹತ್ವದ ವಿಚಾರ.
ಆನ್ ಲೈನ್ ವೇದಿಕೆಗಳ ಮೇಲೆ ಹಿಡಿತ ಸಾಧಿಸಲು ಬಯಸಿದ್ದ, ಮುಖ್ಯವಾಗಿ ಸರ್ಕಾರವನ್ನು ವಿಮರ್ಶಿಸುವ ಯೂಟ್ಯೂಬರ್ ಗಳ ಪಾಲಿಗೆ ಅಪಾಯ ಸೃಷ್ಟಿಸಲಿದ್ದ ಹೊಸ ಪ್ರಸಾರ ಮಸೂದೆಯನ್ನು ಮೋದಿ ಮೈತ್ರಿ ಸರ್ಕಾರ ವಾಪಸ್ ಪಡೆದಿದೆ. ವ್ಯಾಪಕ ಟೀಕೆಗಳು ಹಾಗೂ ವಿವಾದದ ಬಳಿಕ ಪ್ರಸಾರ ಮಸೂದೆ 2024ರ ಕರಡನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ವಾಪಸ್ ಪಡೆದಿರುವುದಾಗಿ ವರದಿಯಾಗಿದೆ.
ಆನ್ ಲೈನ್ ಮಾಧ್ಯಮದ ಮೇಲೆ ನಿಯಂತ್ರಣ ಸಾಧಿಸಲು ಸರ್ಕಾರ ಉದ್ದೇಶಿಸಿದೆ ಎಂಬ ವಿಚಾರ ತೀವ್ರ ಆಕ್ಷೇಪಕ್ಕೆ ಮತ್ತು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬಹುದೊಡ್ಡ ಬೆದರಿಕೆಯಾಗಿ ಕಂಡಿದ್ದ ಮಸೂದೆ, ಸರ್ಕಾರದ ಹುಕುಂ ಇಲ್ಲದೆ ಏನನ್ನೂ ಆನ್ ಲೈನ್ ವೇದಿಕೆಗಳಲ್ಲಿ ಪ್ರಸಾರ ಮಾಡಲಾರದ ನಿಬಂಧನೆಗಳನ್ನು ಒಳಗೊಂಡಿತ್ತೆಂಬುದು ಆತಂಕದ ವಿಚಾರವಾಗಿತ್ತು.
ಹೀಗಾಗಿಯೇ ಹಲವು ಪ್ರಶ್ನೆಗಳು ಎದ್ದಿದ್ದವು. ಈಗ, ಪ್ರತಿಕ್ರಿಯೆಗಾಗಿ ಯಾರ ಬಳಿ ಮಸೂದೆಯನ್ನು ಕಳಿಸಲಾಗಿತ್ತೊ ಅವರಿಂದ ಅದನ್ನು ಸರ್ಕಾರ ವಾಪಸ್ ತರಿಸಿಕೊಳ್ಳುತ್ತಿರುವ ಬಗ್ಗೆ ಮಾಹಿತಿಗಳು ಬಂದಿದೆ. ಮಸೂದೆಯ ಕರಡನ್ನು ಹೊಸದಾಗಿ ಸಿದ್ದಪಡಿಸಲು ಸರ್ಕಾರ ಕೆಲಸ ಮಾಡಲಿದೆ ಎಂದು ವರದಿಗಳು ಹೇಳುತ್ತಿವೆ. ಈ ಬಗ್ಗೆ ಪ್ರತಿಕ್ರಿಯೆಗಾಗಿ ಕೇಳಿದ್ದಕ್ಕೆ ಸಚಿವಾಲಯ ಪ್ರತಿಕ್ರಿಯಿಸಿಲ್ಲ ಎಂದು ಇಂಡಿಯನ್ ಎಕ್ಸ್ ಪ್ರೆಸ್ ಹೇಳಿದೆ.
ಸೋಮವಾರ ರಾತ್ರಿ ಎಕ್ಸ್ ನಲ್ಲಿ ಮಾಡಿದ್ದ ಪೋಸ್ಟ್ ನಲ್ಲಿ ಸಚಿವಾಲಯ, ಕಳೆದ ವರ್ಷ ನವೆಂಬರ್ನಲ್ಲಿ ಸಾರ್ವಜನಿಕ ಡೊಮೇನ್ನಲ್ಲಿ ಇರಿಸಲಾದ ಹಿಂದಿನ ಕರಡು ಮಸೂದೆಯನ್ನು ಉಲ್ಲೇಖಿಸಿತ್ತು. ಅದರ ಬಗ್ಗೆ ಸಮಾಲೋಚನೆ ನಡೆಯುತ್ತಿರುವುದಾಗಿ ಅದರಲ್ಲಿ ಹೇಳಲಾಗಿತ್ತಲ್ಲದೆ, ಅಭಿಪ್ರಾಯ ತಿಳಿಸಲು ಅಕ್ಟೋಬರ್ 15ರವರೆಗೆ ಕಾಲಾವಕಾಶ ನೀಡುತ್ತಿದ್ದು, ವಿವರವಾದ ಸಮಾಲೋಚನೆ ಬಳಿಕ ಹೊಸ ಕರಡನ್ನು ಪ್ರಕಟಿಸುವ ಬಗ್ಗೆ ಹೇಳಿತ್ತು. ಆದರೆ, ಕಳೆದ ತಿಂಗಳು ಅಭಿಪ್ರಾಯ ಕೋರಿ ಕೆಲವರ ಬಳಿ ಹಂಚಿಕೊಳ್ಳಲಾಗಿದ್ದ ಹೊಸ ಕರಡು ಮಸೂದೆಯನ್ನು ವಾಪಸ್ ಕಳಿಸಲು ಕೋರಿರುವ ಬಗ್ಗೆ ಎಕ್ಸ್ ಪೋಸ್ಟ್ ನಲ್ಲಿ ಯಾವುದೇ ಉಲ್ಲೇಖವಿರಲಿಲ್ಲ.
ಹೊಸ ಕರಡು ಮಸೂದೆ ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು ಆನ್ ಲೈನ್ ವೇದಿಕೆಗಳಿಗಾಗಿ ವೀಡಿಯೊ ನಿರ್ಮಿಸುವವರ ಮೇಲೆ ಅಂಕುಶವಾಗಲಿದೆ ಎನ್ನಲಾಗಿತ್ತು. ಒಟಿಟಿ ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ಪ್ರಸಾರವಾಗಬೇಕಾದ ವಿಷಯದ ಮೇಲೆ ಪೂರ್ತಿ ಹತೋಟಿ ಸಾಧಿಸಲು ಸರ್ಕಾರ ಮುಂದಾಗಿದ್ದುದು ತೀವ್ರ ಟೀಕೆಗೆ ಒಳಗಾಗಿತ್ತು.
ಯೂಟ್ಯೂಬ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವವರನ್ನು ಬ್ರಾಡ್ಕಾಸ್ಟರ್ ಎಂಬ ವ್ಯಾಪ್ತಿಗೆ ತರಲು ಸರ್ಕಾರ ಉದ್ದೇಶಿಸಿತ್ತು. ಯೂಟ್ಯೂಬರ್ ಗಳೂ ಸೇರಿದಂತೆ ಆನ್ ಲೈನ್ನಲ್ಲಿ ನಿಯಮಿತವಾಗಿ ವೀಡಿಯೊಗಳನ್ನು ಪೋಸ್ಟ್ ಮಾಡುವವರು, ಸುದ್ದಿ ಅಥವಾ ಪ್ರಚಲಿತ ವಿದ್ಯಮಾನಗಳ ಕುರಿತು ವೀಡಿಯೊ ಮಾಡುವವರು ಅಥವಾ ಬರೆಯುವವರೆಲ್ಲ ಸರ್ಕಾರದ ನಿಯಂತ್ರಣಕ್ಕೆ ಬರುತ್ತಿದ್ದರು. ಅವರೆಲ್ಲರೂ ಕಾರ್ಯಕ್ರಮ ಸಂಹಿತೆ ಮತ್ತು ಜಾಹೀರಾತು ಸಂಹಿತೆಗೆ ಒಳಪಡುವ ಮೂಲಕ ಪೂರ್ತಿಯಾಗಿ ಸರ್ಕಾರದ ನಿಯಂತ್ರಣ ಅವರ ಮೇಲೆ ಇರುವಂತಾಗುತ್ತಿತ್ತು. ಸರಕಾರದ ಈ ಹೊಸ ಕಾನೂನಿನಲ್ಲಿ ಯೂಟ್ಯೂಬರ್ ಗಳ ಉಪಕರಣಗಳನ್ನು ವಶಪಡಿಸಿಕೊಳ್ಳುವ ಅವಕಾಶವೂ ಇತ್ತು.
ಈ ಹೊಸ ಮಸೂದೆ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಪತ್ರಕರ್ತ ರವೀಶ್ ಕುಮಾರ್ ಸಹಿತ ದೇಶದ ಪ್ರಮುಖ ಪತ್ರಕರ್ತರು, ಪತ್ರಕರ್ತರ ಸಂಘಟನೆಗಳು ಇದನ್ನು ಕಟುವಾಗಿ ವಿರೋಧಿಸಿದ್ದವು. ಸದ್ಯಕ್ಕಂತೂ ಸರ್ಕಾರ ಈ ಮಸೂದೆ ತರುವ ವಿಚಾರದಿಂದ ಹಿಂದೆ ಸರಿದಂತಾಗಿದೆ. ಅದು ಯಾವ ಬದಲಾವಣೆಗಳನ್ನು ಮಾಡಲಿದೆ ಎಂಬುದು ಕುತೂಹಲ ಕೆರಳಿಸಿದೆ.
ತನಗೆ ಬೇಕಾದ ಹಾಗೆ ತನಗೆ ಸರಿಕಂಡ ಹಾಗೆ ಮಸೂದೆಗಳನ್ನು ಅಂಗೀಕರಿಸಿ ಕಾನೂನು ತಂದುಬಿಡುತ್ತಿದ್ದ ಮೋದಿ ಸರ್ಕಾರ ಮೂರನೆ ಅವಧಿಯಲ್ಲಿ ಹಾಗೆ ಮಾಡಲಾಗುತ್ತಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಇತ್ತೀಚೆಗೆ ವಕ್ಫ್ ಮಸೂದೆಯನ್ನು ಜಂಟಿ ಸದನ ಸಮಿತಿಯ ಮರುಪರಿಶೀಲನೆಗೆ ಕಳಿಸಿದ್ದು ಮಹತ್ವದ ಬೆಳವಣಿಗೆಯಾಗಿತ್ತು. ವಿಪಕ್ಷಗಳ ಮಾತಿಗೆ ಮಣಿದು ಮಸೂದೆಯೊಂದನ್ನು ಹಾಗೆ ಸಮಿತಿಯ ಪರಿಶೀಲಿನೆಗೆ ಕಳಿಸಿದ್ದು ಕಳೆದ 10 ವರ್ಷಗಳಲ್ಲಿಯೇ ಅಪರೂಪದ್ದಾಗಿತ್ತು.
ಈಗ ಕರಡು ಮಸೂದೆಗೆ ವ್ಯಾಪಕ ಟೀಕೆ ಮತ್ತು ವಿರೋಧ ವ್ಯಕ್ತವಾದ ಬಳಿಕ ಅದನ್ನು ಸರ್ಕಾರ ವಾಪಸ್ ಪಡೆದಿದೆ ಎಂಬುದು ಸಣ್ಣ ವಿಚಾರವಲ್ಲ. ಪ್ರಜಾಪ್ರಭುತ್ವದ ದೃಷ್ಟಿಯಿಂದ, ಅಭಿವ್ಯಕ್ತಿ ಸ್ವಾತಂತ್ರ್ಯದ ದೃಷ್ಟಿಯಿಂದ ಇದೊಂದು ಮಹತ್ವದ ವಿಚಾರ.