ಹಿಟ್-ಆ್ಯಂಡ್-ರನ್ ಅಪಘಾತಗಳಲ್ಲಿ ಪರಿಹಾರ ಹೆಚ್ಚಳ ; ಪರಿಗಣಿಸಲು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ
ಸುಪ್ರೀಂ ಕೋರ್ಟ್ | Photo: PTI
ಹೊಸದಿಲ್ಲಿ: ಹಿಟ್-ಆ್ಯಂಡ್-ರನ್ ಅಪಘಾತಗಳಲ್ಲಿ ಮೃತ ಪಟ್ಟವರಿಗೆ ಮತ್ತು ಗಂಭೀರ ಗಾಯಾಳುಗಳಿಗೆ ಪರಿಹಾರ ಮೊತ್ತವನ್ನು ವಾರ್ಷಿಕವಾಗಿ ಹೆಚ್ಚಿಸಬಹುದೇ ಎನ್ನುವುದನ್ನು ಪರಿಗಣಿಸುವಂತೆ ಸರ್ವೋಚ್ಚ ನ್ಯಾಯಾಲಯವು ಕೇಂದ್ರಕ್ಕೆ ನಿರ್ದೇಶ ನೀಡಿದೆ. ಎಂಟು ವಾರಗಳಲ್ಲಿ ಈ ಬಗ್ಗೆ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಸರಕಾರಕ್ಕೆ ಸೂಚಿಸಿದ ನ್ಯಾಯಾಲಯವು ವಿಚಾರಣೆಯನ್ನು ಎ.22ಕ್ಕೆ ಮುಂದೂಡಿದೆ.
ಮೋಟರ್ ವಾಹನಗಳ ಕಾಯ್ದೆ,1988 ಹಿಟ್-ಆ್ಯಂಡ್-ರನ್ ಪ್ರಕರಣಗಳಲ್ಲಿ ಮೃತರ ಕುಟುಂಬಕ್ಕೆ ಎರಡು ಲಕ್ಷ ರೂ.ಅಥವಾ ಕೇಂದ್ರ ಸರಕಾರವು ಸೂಚಿಸಬಹುದಾದ ಹೆಚ್ಚಿನ ಮೊತ್ತ ಮತ್ತು ಗಂಭೀರ ಗಾಯಾಳುಗಳಿಗೆ 50,000 ರೂ.ಗಳ ಪರಿಹಾರವನ್ನು ಒದಗಿಸುತ್ತದೆ ಎನ್ನುವುದನ್ನು ಗಮನಕ್ಕೆ ತೆಗೆದುಕೊಂಡ ಸರ್ವೋಚ್ಚ ನ್ಯಾಯಾಲಯವು, ಕಾಯ್ದೆಯಡಿ ಪರಿಹಾರ ಯೋಜನೆಯ ಬಗ್ಗೆ ಇಂತಹ ಅಪಘಾತಗಳ ಸಂತ್ರಸ್ತರ ಕುಟುಂಬ ಸದಸ್ಯರಿಗೆ ತಿಳಿಸುವಂತೆ ಪೋಲಿಸರಿಗೂ ಸೂಚಿಸಿತು.
ಇತ್ತೀಚಿನ ವರ್ಷಗಳಲ್ಲಿ ಹಿಟ್-ಆ್ಯಂಡ್-ರನ್ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ತನ್ನ ಜ.12ರ ಆದೇಶದಲ್ಲಿ ಹೇಳಿದ ನ್ಯಾಯಮೂರ್ತಿಗಳಾದ ಎ.ಎಸ್.ಓಕಾ ಮತ್ತು ಪಂಕಜ ಮಿತ್ತಲ್ ಅವರ ಪೀಠವು, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ವರದಿಯಂತೆ 2016ರಲ್ಲಿ 55,942,2017ರಲ್ಲಿ 65,186,2018ರಲ್ಲಿ 69,621 ಮತ್ತು 2019ರಲ್ಲಿಯೂ ಅಷ್ಟೇ ಸಂಖ್ಯೆಯಲ್ಲಿ ಹಿಟ್-ಆ್ಯಂಡ್-ರನ್ ಅಪಘಾತಗಳು ಸಂಭವಿಸಿವೆ. ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲಿ ಅಪಘಾತಗಳು ಕಡಿಮೆಯಾಗಿದ್ದವು ಎಂದು ತಿಳಿಸಿದೆ.
ಕಳೆದ ಐದು ವರ್ಷಗಳಲ್ಲಿ ಹಿಟ್-ಆ್ಯಂಡ್-ರನ್ ಪ್ರಕರಣಗಳಲ್ಲಿ 660 ಜನರು ಮೃತಪಟ್ಟು, 113 ಜನರು ಗಾಯಗೊಂಡಿದ್ದಾರೆ. ಈ ಪ್ರಕರಣಗಳಲ್ಲಿ 184.60 ಲಕ್ಷ ರೂ. ಪರಿಹಾರವನ್ನು ಪಾವತಿಸಲಾಗಿದೆ ಎಂದು ಈ ವರ್ಷದ ಮಾರ್ಚ್ ನಲ್ಲಿ ಲೋಕಸಭೆಯಲ್ಲಿ ಸಚಿವಾಲಯವು ನೀಡಿದ್ದ ಉತ್ತರವನ್ನೂ ತನ್ನ ಆದೇಶದಲ್ಲಿ ಗಮನಿಸಿರುವ ಸರ್ವೋಚ್ಚ ನ್ಯಾಯಾಲಯವು, ವರದಿಯಾಗಿರುವ ಹಿಟ್-ಆ್ಯಂಡ್-ರನ್ ರಸ್ತೆ ಅಪಘಾತಗಳ ಸಂಖ್ಯೆ ಮತ್ತು ಪರಿಹಾರವನ್ನು ಕೋರಿ ದಾಖಲಾಗಿರುವ ಪ್ರಕರಣಗಳ ಸಂಖ್ಯೆಯನ್ನು ಹೋಲಿಸಿದರೆ ಅತ್ಯಲ್ಪ ಸಂಖ್ಯೆಯ ಸಂತ್ರಸ್ತರು ಪರಿಹಾರ ಯೋಜನೆಯ ಲಾಭವನ್ನು ಪಡೆದಿದ್ದಾರೆ ಎನ್ನುವುದು ಕಂಡುಬರುತ್ತದೆ. ಪರಿಹಾರ ಯೋಜನೆಯ ಬಗ್ಗೆ ಸಂತ್ರಸ್ತರಿಗೆ ಗೊತ್ತಿಲ್ಲದಿರುವುದು ಇದಕ್ಕೆ ಒಂದು ಕಾರಣವಾಗಿರಬಹುದು ಎಂದು ಹೇಳಿತು.
‘ಹಣದ ಮೌಲ್ಯವು ಕಾಲಾನಂತರದಲ್ಲಿ ಕಡಿಮೆಯಾಗುತ್ತದೆ. ಹೀಗಾಗಿ ಪರಿಹಾರ ಮೊತ್ತವನ್ನು ಕ್ರಮೇಣ ವಾರ್ಷಿಕವಾಗಿ ಹೆಚ್ಚಿಸಬಹುದೇ ಎನ್ನುವುದನ್ನು ಪರಿಶೀಲಿಸಲು ನಾವು ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡುತ್ತಿದ್ದೇವೆ. ಇಂದಿನಿಂದ ಎಂಟು ವಾರಗಳ ಒಳಗೆ ಸರಕಾರವು ಈ ಬಗ್ಗೆ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಬೇಕು’ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿತು.
ಹಿಟ್-ಆ್ಯಂಡ್-ರನ್ ಪ್ರಕರಣಗಳಲ್ಲಿ ಪರಿಹಾರ ಪಾವತಿಗೆ ಸಂಬಂಧಿಸಿದ ಮೋಟರ್ ವಾಹನಗಳ ಕಾಯ್ದೆಯ ನಿಬಂಧನೆಗಳ ಪರಿಣಾಮಕಾರಿ ಅನುಷ್ಠಾನ ಕುರಿತು ಸಲ್ಲಿಸಲಾದ ನಿವೇದನೆಗಳನ್ನು ಆಲಿಸಿದ ಬಳಿಕ ಪೀಠವು ಈ ಆದೇಶವನ್ನು ಹೊರಡಿಸಿದೆ. ರಸ್ತೆ ಸುರಕ್ಷತಾ ನಿಯಮಗಳ ಅನುಷ್ಠಾನ ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ನಡೆಸುತ್ತಿದೆ.