ಕನಿಷ್ಠ ಬೆಂಬಲ ಬೆಲೆ ಖಾತ್ರಿಪಡಿಸಲು ಸರ್ಕಾರದ ಮೇಲೆ ಇಂಡಿಯಾ ಮೈತ್ರಿಕೂಟ ಒತ್ತಡ ಹೇರಲಿದೆ: ರೈತರ ನಿಯೋಗಕ್ಕೆ ರಾಹುಲ್ ಗಾಂಧಿ ಭರವಸೆ
ರಾಹುಲ್ ಗಾಂಧಿ | PC : PTI
ಹೊಸದಿಲ್ಲಿ: ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್ಪಿ) ಕಾನೂನಾತ್ಮಕ ಖಾತ್ರಿ ಒದಗಿಸಲು ಇಂಡಿಯಾ ಮೈತ್ರಿಕೂಟವು ಸರ್ಕಾರದ ಮೇಲೆ ಒತ್ತಡ ಹೇರಿ ರೈತರಿಗೆ ಎಂಎಸ್ಪಿ ದೊರೆಯಲು ಶ್ರಮಿಸಲಿದೆ ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಇಂದು ಸಂಸತ್ ಭವನ ಸಂಕೀರ್ಣದಲ್ಲಿ ತಮ್ಮನ್ನು ಭೇಟಿಯಾದ ರೈತರ ನಿಯೋಗದ ಜೊತೆ ಮಾತನಾಡಿ ಅವರಿಗೆ ಭರವಸೆ ನೀಡಿದ್ದಾರೆ.
ಪಂಜಾಬ್, ಹರ್ಯಾಣ, ಉತ್ತರ ಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಆಂಧ್ರ ಪ್ರದೇಶದ 12 ರೈತ ಮುಖಂಡರು ನಿಯೋಗದಲ್ಲಿದ್ದರು ಹಾಗೂ ತಾವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ರಾಹುಲ್ ಗಾಂಧಿ ಅವರ ಗಮನ ಸೆಳೆದರು.
“ನಾವು ಈ ವಿಚಾರ ಇಂಡಿಯಾ ಮೈತ್ರಿಕೂಟದ ನಾಯಕರೊಂದಿಗೆ ಚರ್ಚಿಸಿ ನಂತರ ಸರ್ಕಾರದ ಮೇಲೆ ಎಂಎಸ್ಪಿಯನ್ನು ಕಾನೂನಾತ್ಮಕವಾಗಿ ಖಾತ್ರಿಪಡಿಸಲು ಒತ್ತಡ ಹೇರುತ್ತೇವೆ,” ಎಂದು ರಾಹುಲ್ ಹೇಳಿದರು.
ರಾಹುಲ್ ಗಾಂಧಿ ಅವರು ರೈತರ ನಿಯೋಗದ ಜೊತೆ ಮಾತನಾಡಿದ ಸಂದರ್ಭ ಅವರೊಂದಿಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ಪಂಜಾಬ್ನ ಮಾಜಿ ಸಿಎಂ ಚರಣಜಿತ್ ಸಿಂಗ್ ಚನ್ನಿ, ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಮತ್ತು ಇತರ ಪಕ್ಷ ನಾಯಕರು ಇದ್ದರು.