‘ಇಂಡಿಯಾ ಮೈತ್ರಿಕೂಟ’ದಿಂದ ಯುವಕರಿಗೆ ಉದ್ಯೋಗಗಳ ಮುಚ್ಚಿದ ಬಾಗಿಲು ತೆರೆಯಲಿದೆ: ರಾಹುಲ್ ಗಾಂಧಿ
ರಾಹುಲ್ ಗಾಂಧಿ | Photo: PTI
ಹೊಸದಿಲ್ಲಿ: ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡದ ನರೇಂದ್ರ ಮೋದಿ ಸರಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ವಾಗ್ದಾಳಿ ನಡೆಸಿದ್ದಾರೆ.
ಯುವಕರಿಗೆ ಉದ್ಯೋಗಗಳ ಮುಚ್ಚಿದ ಬಾಗಿಲನ್ನು ತೆರೆಯುವುದು ‘ಇಂಡಿಯಾ’ ಮೈತ್ರಿಕೂಟದ ಸಂಕಲ್ಪವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಉದ್ದೇಶ ಉದ್ಯೋಗವನ್ನು ಒದಗಿಸುವುದಲ್ಲ ಎಂದು ಅವರು ಹೇಳಿದ್ದಾರೆ.
‘‘ಕೇಂದ್ರ ಸರಕಾರ ಸಂಸತ್ತಿನಲ್ಲಿ ಮಂಡಿಸಿದ ಅಂಕಿ-ಅಂಶಗಳನ್ನು ಪರಿಗಣಿಸುವುದಾದರೆ, 78 ಇಲಾಖೆಗಳಲ್ಲಿ 9,64,000 ಹುದ್ದೆಗಳು ಖಾಲಿ ಇವೆ. ಪ್ರಮುಖ ಇಲಾಖೆಗಳನ್ನು ಗಮನಿಸಿದರೆ, ರೈಲ್ವೆಯಲ್ಲಿ 2.93 ಲಕ್ಷ ಹುದ್ದೆಗಳು, ಗೃಹ ಸಚಿವಾಲಯದಲ್ಲಿ 1.43 ಹುದ್ದೆಗಳು, ರಕ್ಷಣಾ ಸಚಿವಾಲಯದಲ್ಲಿ 2.64 ಹುದ್ದೆಗಳು ಖಾಲಿ ಇವೆ’’ ಎಂದು ಅವರು ತಿಳಿಸಿದರು.
15 ಪ್ರಮುಖ ಇಲಾಖೆಗಳಲ್ಲಿ ಶೇ. 30ಕ್ಕಿಂತ ಹೆಚ್ಚು ಹುದ್ದೆಗಳು ಏಕೆ ಖಾಲಿ ಇವೆ ಎಂಬುದಕ್ಕೆ ಕೇಂದ್ರ ಸರಕಾರದ ಬಳಿ ಉತ್ತರ ಇದೆಯೇ ಎಂದು ಅವರು ಪ್ರಶ್ನಿಸಿದರು.
‘‘ಸುಳ್ಳು ಗ್ಯಾರಂಟಿಗಳ ಚೀಲವನ್ನು ತನ್ನೊಂದಿಗೆ ಕೊಂಡೊಯ್ಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಯಲ್ಲಿ ದೊಡ್ಡ ಸಂಖ್ಯೆಯ ತುಂಬಾ ಮುಖ್ಯ ಹುದ್ದೆಗಳು ಯಾಕೆ ಖಾಲಿ ಇವೆ’’ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು
ಶಾಶ್ವತ ಉದ್ಯೋಗ ನೀಡುವುದು ಹೊರೆ ಎಂದು ಪರಿಗಣಿಸಿರುವ ಬಿಜೆಪಿ ಸರಕಾರ ಗುತ್ತಿಗೆ ವ್ಯವಸ್ಥೆಗೆ ನಿರಂತರ ಪ್ರೋತ್ಸಾಹಿಸುತ್ತಿದೆ. ಇದಕ್ಕೆ ಭದ್ರತೆಯೂ ಇಲ್ಲ, ಗೌರವವೂ ಇಲ್ಲ ಎಂದು ರಾಹುಲ್ ಗಾಂಧಿ ಹೇಳಿದರು.