ತಾಲಿಬಾನ್ ಕರೆದ ಸಭೆಗೆ ಭಾರತ ಸೇರಿ 10 ದೇಶಗಳು ಭಾಗಿ
Photo: X/@HafizZiaAhmad
ಹೊಸದಿಲ್ಲಿ: ತಾಲಿಬಾನ್ ಆಡಳಿತ ಸೋಮವಾರ ಕಾಬೂಲ್ನಲ್ಲಿ ಕರೆದಿದ್ದ ರಾಜತಾಂತ್ರಿಕ ಪ್ರತಿನಿಧಿಗಳ ಸಭೆಯಲ್ಲಿ ಭಾರತ ಸೇರಿದಂತೆ ಈ ಭಾಗದ 10 ದೇಶಗಳು ಭಾಗವಹಿಸಿವೆ. ಭಾರತ ತಾಲಿಬಾನ್ ಆಡಳಿತವನ್ನು ಅಧಿಕೃತವಾಗಿ ಮಾನ್ಯ ಮಾಡದಿದ್ದರೂ, ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರದ ಜತೆಗೆ ತೊಡಗಿಸಿಕೊಳ್ಳುವಿಕೆಯ ಸಂಕೇತವಾಗಿದೆ ಎಂದು ವರದಿಯಾಗಿದೆ.
ಪ್ರಾದೇಶಿಕ ಸಹಕಾರ ಉಪಕ್ರಮದ ಸಭೆಯನ್ನು ಉದ್ದೇಶಿಸಿ ತಾಲಿಬಾನ್ನ ಹಂಗಾಮಿ ವಿದೇಶಾಂಗ ವ್ಯವಹಾರಗಳ ಸಚಿವ ಅಮೀರ್ ಖಾನ್ ಮುತ್ತಕಿ ಮಾತನಾಡಿದರು. ಈ ಸಭೆಯಲ್ಲಿ ರಷ್ಯಾ, ಚೀನಾ, ಇರಾನ್, ಪಾಕಿಸ್ತಾನ, ಉಜ್ಬೇಕಿಸ್ತಾನ, ತುರ್ಕಮೇನಿಸ್ತಾನ, ಕಝಕಸ್ತಾನ್, ಟರ್ಕಿ ಮತ್ತು ಇಂಡೋನೇಷ್ಯಾ ಕೂಡಾ ಭಾಗವಹಿಸಿದ್ದವು. ರಷ್ಯಾದ ವಿಶೇಷ ಪ್ರತಿನಿಧಿ ಝಮೀರ್ ಕಬುಲೋವ್ ಆ ದೇಶವನ್ನು ಪ್ರತಿನಿಧಿಸಿದ್ದರು.
ಈ ಸಭೆಯ ಬಗ್ಗೆ ಭಾರತ ಸರ್ಕಾರ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಅಫ್ಘಾನಿಸ್ತಾನದ ಹಂಗಾಮಿ ರಾಯಭಾರಿ ಬದ್ರುದ್ದೀನ್ ಹಕ್ಕಾನಿಯವರನ್ನು ಅಬುಧಾಬಿಯಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭಕ್ಕೆ ಆಹ್ವಾನಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ತಾಲಿಬಾನ್ ವಿದೇಶಾಂಗ ಸಚಿವಾಲಯದ ಉಪ ವಕ್ತಾರ ಹಫೀಜ್ ಝಿಯಾ ಅಹ್ಮದ್ ಅವರು, ಸಭೆಯಲ್ಲಿ ಭಾಗವಹಿಸಿದ್ದ ಭಾರತೀಯ ಪ್ರತಿನಿಧಿಯ ಹೇಳಿಕೆಯನ್ನು ಉಲ್ಲೇಖಿಸಿ, "ಅಫ್ಘಾನಿಸ್ತಾನದ ಸ್ಥಿರತೆಗೆ ಪೂರಕವಾದ ಕ್ರಮಗಳನ್ನು ಭಾರತ ಬೆಂಬಲಿಸುತ್ತದೆ" ಎಂದು ಸ್ಪಷ್ಟಪಡಿಸಿದ್ದಾರೆ. "ಅಫ್ಘಾನಿಸ್ತಾನಕ್ಕೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಮತ್ತು ಪ್ರಾದೇಶಿಕ ಉಪಕ್ರಮಗಳಲ್ಲಿ ಭಾರತ ಸಕ್ರಿಯವಾಗಿ ಪಾತ್ರ ವಹಿಸಲಿದೆ. ಜತೆಗೆ ದೇಶದ ಸ್ಥಿರತೆ ಮತ್ತು ಅಭಿವೃದ್ಧಿಯ ಪ್ರಯತ್ನಗಳನ್ನು ಬೆಂಬಲಿಸಿದೆ" ಎಂದು ಭಾರತೀಯ ಪ್ರತಿನಿಧಿಯ ಹೇಳಿಕೆಯನ್ನು ಉಲ್ಲೇಖಿಸಿ ಅಹ್ಮದ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.