ಅದಾನಿ ಪ್ರಕರಣ: ಸಂಸತ್ತಿನ ಆವರಣದಲ್ಲಿ ಇಂಡಿಯಾ ಮೈತ್ರಿಕೂಟದ ಸಂಸದರಿಂದ ಪ್ರತಿಭಟನೆ
Photo: PTI
ಹೊಸದಿಲ್ಲಿ: ಮಂಗಳವಾರ ಅದಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸತ್ತಿನ ಆವರಣದಲ್ಲಿ ಪ್ರತಿಭಟನೆ ನಡೆಸಿದ ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟದ ಹಲವು ಮಿತ್ರಪಕ್ಷಗಳು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಂಟಿ ಸದನ ಸಮಿತಿ ತನಿಖೆ ನಡೆಸಬೇಕು ಎಂಬ ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿದವು.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿದ ಕಾಂಗ್ರೆಸ್, ಆಪ್, ಆರ್ಜೆಡಿ, ಶಿವಸೇನೆ (ಉದ್ಧವ್ ಬಣ), ಡಿಎಂಕೆ ಹಾಗೂ ಎಡ ಪಕ್ಷಗಳ ಸಂಸದರು, ಅವರ ಉತ್ತರದಾಯಿತ್ವಕ್ಕೆ ಆಗ್ರಹಿಸಿದರು.
ಸಂಸತ್ ಭವನದ ಮಕರ ದ್ವಾರದ ಮೆಟ್ಟಿಲುಗಳ ಮೇಲೆ ನಡೆದ ಈ ಪ್ರತಿಭಟನೆಯಲ್ಲಿ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂದಿ, ಆಪ್ ನ ಸಂಜಯ್ ಸಿಂಗ್, ಆರ್ಜೆಡಿಯ ಮೀಸಾ ಭಾರ್ತಿ ಹಾಗೂ ಶಿವಸೇನೆ(ಉದ್ಧವ್ ಬಣ)ಯ ಅರವಿಂದ್ ಸಾವಂತ್ ಕೂಡಾ ಪಾಲ್ಗೊಂಡಿದ್ದರು.
ಲಂಚ ಮತ್ತು ವಂಚನೆ ಆರೋಪದಲ್ಲಿ ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಹಾಗೂ ಆ ಸಂಸ್ಥೆಯ ಇನ್ನಿತರ ಅಧಿಕಾರಿಗಳ ವಿರುದ್ಧ ಅಮೆರಿಕ ದೋಷಾರೋಪ ಹೊರಿಸಿರುವ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಹಾಗೂ ಇನ್ನೂ ಕೆಲವು ವಿರೋಧ ಪಕ್ಷಗಳು ಈ ಕುರಿತು ಜಂಟಿ ಸದನ ಸಮಿತಿ ತನಿಖೆಗಾಗಿ ಆಗ್ರಹಿಸುತ್ತಿವೆ.
ಕೋಟ್ಯಾಧಿಪತಿ ಗೌತಮ್ ಅದಾನಿ ವಿರುದ್ಧ ಅಮೆರಿಕ ಲಂಚ ಮತ್ತು ವಂಚನೆ ದೋಷಾರೋಪವನ್ನು ಹೊರಿಸಿರುವುದರಿಂದ, ಅದಾನಿ ಸಮೂಹ ಸಂಸ್ಥೆಯು ಭಾಗಿಯಾಗಿರುವ ಹಗರಣಗಳ ಕುರಿತು ಜಂಟಿ ಸದನ ಸಮಿತಿ ತನಿಖೆ ನಡೆಯಬೇಕು ಎಂಬ ತನ್ನ ಬೇಡಿಕೆಗೆ ಪುಷ್ಟಿ ದೊರೆತಂತಾಗಿದೆ ಎಂದು ಕಾಂಗ್ರೆಸ್ ಹೇಳಿದೆ.
ಅದಾನಿ ಸಮೂಹದ ವಿರುದ್ಧ ಅಮೆರಿಕ ದೋಷಾರೋಪ ಹೊರಿಸಿರುವುದರಿಂದ, ಈ ಸಮೂಹ ಸಂಸ್ಥೆಯ ವ್ಯವಹಾರಗಳ ಕುರಿತು ಜಂಟಿ ಸದನ ಸಮಿತಿ ತನಿಖೆ ನಡೆಯಬೇಕು ಎಂದು ಆಗ್ರಹಿಸುತ್ತಿರುವ ವಿರೋಧ ಪಕ್ಷಗಳಿಗೆ ಹೊಸ ಅಸ್ತ್ರ ದೊರೆತಂತಾಗಿದೆ.
ಗೌತಮ್ ಅದಾನಿಯನ್ನು ತಕ್ಷಣವೇ ಬಂಧಿಸಬೇಕು ಎಂದು ರಾಹುಲ್ ಗಾಂಧಿ ಒತ್ತಾಯಿಸಿದ್ದರೆ, ತನ್ನ ವಿರುದ್ಧದ ಆರೋಪಗಳು ಆಧಾರ ರಹಿತ ಎಂದು ಅದಾನಿ ಸಮೂಹ ಅಲ್ಲಗಳೆದಿದೆ.