ಜೀವ, ಆರೋಗ್ಯ ವಿಮೆಯ ಕಂತಿನ ಮೇಲೆ ಜಿಎಸ್ಟಿ ವಿಧಿಸಿರುವುದನ್ನು ವಿರೋಧಿಸಿ ಇಂಡಿಯಾ ಮೈತ್ರಿಕೂಟ ಪಕ್ಷಗಳಿಂದ ಪ್ರತಿಭಟನೆ
Image Credit: X/@INCIndia
ಹೊಸದಿಲ್ಲಿ: ಜೀವ ವಿಮೆ ಹಾಗೂ ಆರೋಗ್ಯ ವಿಮೆ ಕಂತುಗಳ ಮೇಲೆ ಶೇ. 18ರಷ್ಟು ಜಿಎಸ್ಟಿ ವಿಧಿಸಿರುವುದನ್ನು ವಿರೋಧಿಸಿ ಮಂಗಳವಾರ ಇಂಡಿಯಾ ಮೈತ್ರಿಕೂಟದ ಪಕ್ಷಗಳು ಲೋಕಸಭೆಯಲ್ಲಿ ಪ್ರತಿಭಟನೆ ನಡೆಸಿದವು.
ಲೋಕಸಭೆಯ ಮಕರ ದ್ವಾರದೆಡೆಗಿನ ಮಾರ್ಗದಲ್ಲಿ ಟಿಎಂಸಿ, ಕಾಂಗ್ರೆಸ್, ಆಪ್ ಹಾಗೂ ಎನ್ಸಿಪಿ (ಎಸ್ಸಿ) ಸೇರಿದಂತೆ ಹಲವಾರು ಇಂಡಿಯಾ ಮೈತ್ರಿಕೂಟದ ಪಕ್ಷಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡವು.
"ತೆರಿಗೆ ಭಯೋತ್ಪಾದನೆ" ಎಂಬ ಭಿತ್ತಿ ಫಲಕಗಳನ್ನು ಹಿಡಿದುಕೊಂಡಿದ್ದ ಸಂಸದರು, ಜೀವ ವಿಮೆ ಹಾಗೂ ಆರೋಗ್ಯ ವಿಮೆ ಮೇಲೆ ವಿಧಿಸಲಾಗಿರುವ ಜಿಎಸ್ಟಿಳಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಘೋಷಣೆಗಳನ್ನು ಕೂಗಿದರು.
ಈ ವಿಷಯದ ಕುರಿತು ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದರು ಲೋಕಸಭೆಯಲ್ಲಿ ಪ್ರಸ್ತಾಪಿಸಿದರು ಹಾಗೂ ಈ ಕುರಿತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದಾರೆ.
ಜೀವ ವಿಮೆ ಹಾಗೂ ಆರೋಗ್ಯ ವಿಮೆಯ ಮೇಲೆ ಜಿಎಸ್ಟಿ ವಿಧಿಸುವುದರಿಂದ ಈ ಉದ್ಯಮ ವಲಯದ ಬೆಳವಣಿಗೆಗೆ ತೊಡಕುಂಟಾಗುತ್ತದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಕೂಡಾ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದಾರೆ.