ದ್ವೇಷ ಭಾಷಣ: ಅಸ್ಸಾಂ ಸಿಎಂ ಹಿಮಂತ ಶರ್ಮಾ ವಿರುದ್ಧ INDIA ಮೈತ್ರಿಕೂಟದಿಂದ ಚುನಾವಣಾ ಆಯೋಗಕ್ಕೆ ಪತ್ರ
ಹಿಮಂತ ಬಿಸ್ವಾ ಶರ್ಮಾ (PTI)
ಹೊಸದಿಲ್ಲಿ: ಜಾರ್ಖಂಡ್ ಬಿಜೆಪಿ ಚುನಾವಣಾ ಉಸ್ತುವಾರಿ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಚುನಾವಣಾ ಭಾಷಣ ದ್ವೇಷದಿಂದ ಕೂಡಿದ್ದು, ಅವರ ವಿರುದ್ಧ ತಕ್ಷಣ ಕಠಿಣ ಕ್ರಮವನ್ನು ಕೈಗೊಳ್ಳುವಂತೆ INDIA ಮೈತ್ರಿ ಪಕ್ಷದ ನಾಯಕರು ಆಗ್ರಹಿಸಿದ್ದಾರೆ.
ಭಾರತೀಯ ಚುನಾವಣಾ ಆಯೋಗ ಮತ್ತು ರಾಜ್ಯದ ಮುಖ್ಯ ಚುನಾವಣಾಧಿಕಾರಿಗೆ ಈ ಕುರಿತು ರಾಷ್ಟ್ರೀಯ ಜನತಾ ದಳ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ, ಕಾಂಗ್ರೆಸ್ ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ(ಜೆಎಂಎಂ) ಪತ್ರವನ್ನು ಬರೆದಿದೆ. ನವೆಂಬರ್ 1ರಂದು ಜಾರ್ಖಂಡ್ ನ ಶರತ್ ಪ್ರದೇಶದಲ್ಲಿ ಸಾರ್ವಜನಿಕ ಸಭೆ ಮತ್ತು ಕಾರ್ಯಕ್ರಮದಲ್ಲಿ ಮುಸ್ಲಿಮರನ್ನು ಗುರಿಯಾಗಿಸಿ ಹೇಳಿಕೆ ನೀಡಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಪತ್ರದಲ್ಲಿ, ಒಳನುಸುಳುಕೋರರು ಎಂಬ ಪದಗಳನ್ನು ಬಳಸುವ ಮೂಲಕ ಹಿಮಂತ ಬಿಸ್ವಾ ಶರ್ಮಾ ದ್ವೇಷದ ಜ್ವಾಲೆಯನ್ನು ಹುಟ್ಟುಹಾಕುತ್ತಿದ್ದಾರೆ. ಅವರು ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ನಾಯಕರನ್ನು ಗುರಿಯಾಗಿಸಿಕೊಂಡು ಹೇಳಿಕೆಯನ್ನು ನೀಡುತ್ತಿದ್ದಾರೆ. ಅವರ ವಿರುದ್ಧ ಮುಂದಿನ 24 ಗಂಟೆಗಳಲ್ಲಿ ಚುನಾವಣಾ ಆಯೋಗ ಕ್ರಮ ಕೈಗೊಳ್ಳದಿದ್ದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಹೇಳಿದ್ದಾರೆ.
ಜಾರ್ಖಂಡ್ ಚುನಾವಣಾ ಲಾಭಕ್ಕಾಗಿ ಅವರು ಉದ್ದೇಶಪೂರ್ವಕವಾಗಿ ಧಾರ್ಮಿಕ ಅಲ್ಪಸಂಖ್ಯಾತರನ್ನು ಒಳನುಸುಳುಕೋರರು ಎಂದು ಬಿಂಬಿಸಿ ಕೋಮು ಉದ್ವಿಗ್ನತೆ ಸೃಷ್ಟಿಸಲು ಮತ್ತು ರಾಜಕೀಯ ಲಾಭ ಪಡೆದುಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.