ಪಾಕ್ ಪ್ರಜೆಗಳಿಗೆ ಭಾರತ ನೀಡಿದ್ದ 14 ಬಗೆಯ ವೀಸಾಗಳು ರದ್ದು

ಸಾಂದರ್ಭಿಕ ಚಿತ್ರ PC: istockphoto
ಹೊಸದಿಲ್ಲಿ: ಪಾಕಿಸ್ತಾನ ಪ್ರಜೆಗಳಿಗೆ ನೀಡಿದ್ದ 14 ವಿಧದ ವೀಸಾ ಸೇವೆಗಳನ್ನು ತಕ್ಷಣದಿಂದ ರದ್ದುಪಡಿಸಿರುವುದಾಗಿ ಭಾರತ ಸರ್ಕಾರ ಶುಕ್ರವಾರ ಪ್ರಕಟಿಸಿದೆ. ಪಾಕಿಸ್ತಾನಿ ಪ್ರಜೆಗಳಿಗೆ ನೀಡಿದ್ದ ಧೀರ್ಘಾವಧಿ, ರಾಜತಾಂತ್ರಿಕ ಮತ್ತು ಅಧಿಕಾರಿ ವೀಸಾಗಳನ್ನು ಹೊರತುಪಡಿಸಿ, ಈಗಾಗಲೇ ನೀಡಿರುವ ಎಲ್ಲ ವೀಸಾಗಳನ್ನು ರದ್ದುಪಡಿಸಿರುವುದಾಗಿ ಹೇಳಿದೆ.
ಸಾರ್ಕ್ ವೀಸಾಗಳು ಏಪ್ರಿಲ್ 26ರ ಬಳಿಕ ಹಾಗೂ ವೈದ್ಯಕೀಯ ವೀಸಾಗಳು ಏಪ್ರಿಲ್ 29ರ ಬಳಿಕ ರದ್ದಾಗುತ್ತವೆ. ಇತರ ಎಲ್ಲ ವರ್ಗಗಳ ವೀಸಾಗಳು ಏಪ್ರಿಲ್ 27ರಿಂದಲೇ ರದ್ದಾಗಲಿವೆ. ಒಂದು ವೇಳೆ ನಿರ್ದಿಷ್ಟಪಡಿಸಿದ ಗಡುವಿನ ಒಳಗೆ ಪಾಕಿಸ್ತಾನಿ ಪ್ರಜೆಗಳು ಭಾರತವನ್ನು ತೊರೆಯಲು ವಿಫಲವಾದಲ್ಲಿ, ಅವರನ್ನು ಅವಧಿ ಮೀರಿ ವಾಸಿಸುತ್ತಿರುವ ವಿದೇಶಿ ಪ್ರಜೆಗಳು ಎಂದು ಪರಿಣಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ.
ಜತೆಗೆ ಅವಧಿ ಮೀರಿ ವಾಸಿಸುವ ಪಾಕ್ ಪ್ರಜೆಗಳ ವಿರುದ್ಧ ಹೊಸದಾಗಿ ಜಾರಿ ಮಾಡಲಾದ ವಲಸೆ ಮತ್ತು ವಿದೇಶಿಯರ ಕಾಯ್ದೆ-2025ರ ಅನ್ವಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ.
ಗೃಹ ಸಚಿವಾಲಯದ ವಿದೇಶಿಯರ ವಿಭಾಗ ಈ ಸಂಬಂಧ ಆದೇಶ ಹೊರಡಿಸಿದ್ದು, ಸಾರ್ಕ್ ವೀಸಾ, ಆಗಮನ ವೀಸಾ, ವ್ಯವಹಾರ ವೀಸಾ, ಚಲನಚಿತ್ರ ವೀಸಾ, ಪತ್ರಕರ್ತರ ವೀಸಾ, ವರ್ಗಾಂತರ ವೀಸಾ, ವೈದ್ಯಕೀಯ ವೀಸಾ, ಕಾನ್ಫರೆನ್ಸ್ ವೀಸಾ, ಪರ್ವತಾರೋಹಣ ವೀಸಾ, ವಿದ್ಯಾರ್ಥಿ ವೀಸಾ, ಭೇಟಿ ವೀಸಾ, ಗುಂಪು ಪ್ರವಾಸಿ ವೀಸಾ, ತೀರ್ಥಯಾತ್ರೆ ವೀಸಾ ಮತ್ತು ತೀರ್ಥಯಾತ್ರಾ ಗುಂಪು ವೀಸಾ ಸೇರಿದಂತೆ 14 ಬಗೆಯ ವೀಸಾಗಳನ್ನು ರದ್ದುಪಡಿಸಲಾಗಿದೆ ಹಾಗೂ ಹೊಸ ವೀಸಾಗಳನ್ನು ಪಾಕ್ ಪ್ರಜೆಗಳಿಗೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ರಾಜತಾಂತ್ರಿಕ ವೀಸಾಗಳು ಮತ್ತು ಅಧಿಕಾರಿ ವೀಸಾಗಳು ಮಾನ್ಯವಾಗಿರುತ್ತವೆ. ಇವುಗಳಿಗೆ ಗಡುವನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ನಿರ್ಧರಿಸಬೇಕಿದೆ. ಧೀರ್ಘಾವಧಿ ವೀಸಾಗಳೂ ಮಾನ್ಯವಾಗಿದ್ದು, ಮೂರೂ ವರ್ಗದ ವೀಸಾಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ.