ಶಿಕ್ಷಣ ಭಾರತ ಕೇಂದ್ರಿತವಾಗಬೇಕು: ಮೋಹನ್ ಭಾಗ್ವತ್
ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ (Photo: PTI)
ಹೊಸದಿಲ್ಲಿ: "ಅಭಿವೃದ್ಧಿ ಕುರಿತ ಭಾರತೀಯ ಪರಿಕಲ್ಪನೆ ಸರ್ವಾಂಗೀಣ ಮತ್ತು ಪ್ರಕೃತಿಗೆ ಪೂರಕವಾಗುವಂಥದ್ದು.ಅಭಿವೃದ್ಧಿಯ ವಿದೇಶಿ ಪರಿಕಲ್ಪನೆ ಪ್ರಕೃತಿಯ ವಿರುದ್ಧ ಗೆಲುವು ಸಾಧಿಸುವಂಥದ್ದು. ಆದ್ದರಿಂದ ಅಭಿವೃದ್ಧಿಯ ವಿದೇಶಿ ಮಾದರಿಗಳು ಪ್ರಕೃತಿ ಮತ್ತು ಪರಿಸರಕ್ಕೆ ದೊಡ್ಡ ಹಾನಿಯನ್ನು ಉಂಟು ಮಾಡಿವೆ. ಆದ್ದರಿಂದ ವಿಶ್ವವೇ ಅನುಸರಿಸಬೇಕಾದ ಸ್ವಂತ ಅಭಿವೃದ್ಧಿ ಮಾದರಿಯನ್ನು ನಾವು ರೂಪಿಸಬೇಕು" ಎಂದು ಆರೆಸ್ಸೆಸ್ ಮುಖ್ಯಸ್ಥ ಡಾ.ಮೋಹನ್ ಭಾಗ್ವತ್ ಅಭಿಪ್ರಾಯಪಟ್ಟರು.
ಗುರುಗ್ರಾಮದ ಎಸ್ ಜಿಟಿ ವಿವಿಯಲ್ಲಿ "ಭಾರತೀಯ ಶಿಕ್ಷಣ ಮಂಡಲ- ಯುವ ಆಯಾಮ" ಆಯೋಜಿಸಿದ್ದ ಮೂರು ದಿನಗಳ ರಾಷ್ಟ್ರೀಯ ಸಂಶೋಧಕರ ಸಮ್ಮೇಳನವನ್ನು "ವಿವಿಭಾ-2024" ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಣವಿಲ್ಲದೇ ಅಭಿವೃದ್ಧಿ ಸಾಧ್ಯವಿಲ್ಲ. ಆದರೆ ಅದು ಭಾರತ ಕೇಂದ್ರಿತವಾಗಬೇಕು ಎಂದು ಪ್ರತಿಪಾದಿಸಿದರು.
ವಿಶ್ವದ ಎಲ್ಲೆಡೆಯಿಂದ ಒಳ್ಳೆಯ ಅಂಶಗಳನ್ನು ಪಡೆದುಕೊಳ್ಳೋಣ. ಆದರೆ ಅದರ ಅಂಧಾನುಕರಣೆ ಸಲ್ಲದು. ಭಾರತೀಯ ಜ್ಞಾನ ವ್ಯವಸ್ಥೆಯನ್ನು ಆಧರಿಸಿದ ಸಂಶೋಧನೆಯನ್ನು ಕೈಗೊಳ್ಳುವಂತೆ ಸಂಶೋಧಕರಿಗೆ ಮಾರ್ಗದರ್ಶನ ಮಾಡುವುದು ಶಿಕ್ಷಕರ ಹೊಣೆ" ಎಂದರು.
ವಿಕಸಿತ ಭಾರತದ ಕಡೆಗೆ ಭಾರತ ಪಯಣ ನಡೆಸುತ್ತಿರುವುದರಿಂದ ಮುಂದಿನ 25 ವರ್ಷಗಳ ಅವಧಿ ದೇಶಕ್ಕೆ ಮಹತ್ವದ್ದು ಎಂದು ಆ ಬಳಿಕ ಮಾತನಾಡಿದ ಇಸ್ರೋ ಅಧ್ಯಕ್ಷ ಡಾ.ಎಸ್.ಸೋಮನಾಥ್ ಅಭಿಪ್ರಾಯಪಟ್ಟರು. "ವಿಕಸಿತ ಭಾರತ ಸಾಧನೆಗೆ ಸಂಶೋಧನೆ ಮಹತ್ವದ್ದು. ಇದು ಉದ್ಯಮದ, ಸ್ಟಾರ್ಟಪ್ ಗಳ, ಶಿಕ್ಷಣ, ಕೃಷಿ ಮತ್ತು ಆರೋಗ್ಯ ಸೇರಿದಂತೆ ಹಲವು ವಲಯಗಳ ಸಾಮರ್ಥ್ಯ ಮತ್ತು ಸಾಧ್ಯತೆಯನ್ನು ವಿಸ್ತರಿಸುತ್ತದೆ ಎಂದು ವಿಶ್ಲೇಷಿಸಿದರು.