ರಾಜತಾಂತ್ರಿಕರ ಭದ್ರತೆ ಖಚಿತಪಡಿಸಲು ಬ್ರಿಟನ್ ಗೆ ಭಾರತದ ಆಗ್ರಹ
ಗ್ಲಾಸ್ಗೋ ಗುರುದ್ವಾರಾ ಪ್ರವೇಶಿಸಲು ಭಾರತೀಯ ರಾಯಭಾರಿಗೆ ತಡೆ
ವಿಕ್ರಮ ದೊರೈಸ್ವಾಮಿ | Photo : X/@HCI_London
ಹೊಸದಿಲ್ಲಿ: ಬ್ರಿಟನ್ ನಲ್ಲಿರುವ ಭಾರತೀಯ ರಾಯಭಾರಿ ವಿಕ್ರಮ ದೊರೈಸ್ವಾಮಿಯವರು ಗ್ಲಾಸ್ಗೋದ ಆಲ್ಬರ್ಟ್ ಡೈವ್ ನಲ್ಲಿರುವ ಗುರುದ್ವಾರಾವನ್ನು ಪ್ರವೇಶಿಸುವುದನ್ನು ಇಬ್ಬರು ವ್ಯಕ್ತಿಗಳು ತಡೆದ ಘಟನೆಯ ಬಗ್ಗೆ ಬ್ರಿಟನ್ ಸರಕಾರಕ್ಕೆ ತನ್ನ ಕಳವಳವನ್ನು ವ್ಯಕ್ತಪಡಿಸಿರುವ ಭಾರತವು, ತನ್ನ ರಾಜತಾಂತ್ರಿಕರ ಭದ್ರತೆಯನ್ನು ಖಚಿತಪಡಿಸುವಂತೆ ಬ್ರಿಟನ್ ಗೆ ಆಗ್ರಹಿಸಿದೆ.
“ಗುರುದ್ವಾರಾ ಸಮಿತಿಯು ರಾಯಭಾರಿಗಳನ್ನು ಆಹ್ವಾನಿಸಿತ್ತು. ಹೀಗಾಗಿ ಅವರು ಗುರುದ್ವಾರಾಕ್ಕೆ ತೆರಳಿದ್ದರು. ಆದರೆ ಇಬ್ಬರು ವ್ಯಕ್ತಿಗಳು ಅವರನ್ನು ತಡೆದಿದ್ದರು. ನಾವು ಈ ವಿಷಯವನ್ನು ಬ್ರಿಟಿಷ್ ಅಧಿಕಾರಿಗಳೊಂದಿಗೆ ಕೈಗೆತ್ತಿಕೊಂಡಿದ್ದೇವೆ ಮತ್ತು ನಮ್ಮ ರಾಯಭಾರಿಗೆ ತಳಮಟ್ಟದಲ್ಲಿ ಭದ್ರತೆಯನ್ನು ಒದಗಿಸಬೇಕಿತ್ತೆಂದು ಅವರಿಗೆ ತಿಳಿಸಿದ್ದೇವೆ” ಎಂದು ಬೆಳವಣಿಗೆಯನ್ನು ಅಧಿಕಾರಿಯೋರ್ವರು ತಿಳಿಸಿದರು.
ಸ್ಕಾಟ್ಲಂಡ್ ಪ್ರವಾಸದಲ್ಲಿರುವ ದೊರೈಸ್ವಾಮಿ ಅಲ್ಲಿಯ ಭಾರತೀಯ ಸಮುದಾಯಗಳೊಂದಿಗೆ ಹಲವಾರು ಸಭೆಗಳನ್ನು ನಡೆಸುತ್ತಿದ್ದಾರೆ. ಕೆನಡಾದೊಂದಿಗಿನ ಬಿಕ್ಕಟ್ಟಿನ ಕರಿನೆರಳು ಬ್ರಿಟನ್ನೊಂದಿಗಿನ ತನ್ನ ಸಂಬಂಧದ ಮೇಲೆ ಬೀಳಬಾರದು ಎಂದು ಭಾರತವು ಬಯಸಿದೆ ಮತ್ತು ಇತ್ತೀಚಿನ ಘಟನೆಯನ್ನು ಅತಿರೇಕದ ಕ್ರಮ ಎಂದು ಪರಿಗಣಿಸಲು ಸಿದ್ಧವಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.
ರಾಯಭಾರಿಗಳು ಯಾವುದೇ ಅಡ್ಡಿಯಿಲ್ಲದೆ ಬ್ರಿಟನ್ ನಲ್ಲಿಯ ಇತರ ಗುರುದ್ವಾರಾಗಳಿಗೂ ಭೇಟಿ ನೀಡುತ್ತಿದ್ದಾರೆ ಮತ್ತು ಅವುಗಳ ಆವರಣದಲ್ಲಿ ಅವರ ಪ್ರವೇಶದ ವಿರುದ್ಧ ಯಾವುದೇ ಪ್ರತಿಭಟನೆ ನಡೆದಿಲ್ಲ. ಇತ್ತೀಚಿನ ಘಟನೆಯು ಕೇವಲ ಪ್ರಚಾರದ ಉದ್ದೇಶವನ್ನು ಹೊಂದಿತ್ತು, ಹೀಗಾಗಿ ಅವರು ವಾಗ್ವಾದಕ್ಕಿಳಿದಿರಲಿಲ್ಲ. ಗುರುದ್ವಾರಾ ಸಮಿತಿಯ ಆಹ್ವಾನ ಈಗಲೂ ಇದೆ ಎಂದು ಅವು ತಿಳಿಸಿವೆ.
ಈ ಘಟನೆಯು ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿ ಖಾಲಿಸ್ತಾನ್ ಟೈಗರ್ ಫೋರ್ಸ್ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟ್ ಗಳ ಕೈವಾಡವಿದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ ಆರೋಪಿಸಿದ ಬಳಿಕ ಸೃಷ್ಟಿಯಾಗಿರುವ ಉದ್ವಿಗ್ನತೆಯನ್ನು ಇನ್ನಷ್ಟು ಹೆಚ್ಚಿಸಿದೆ.
ಈ ವರ್ಷದ ಮಾರ್ಚ್ 19 ರಂದು ಲಂಡನ್ ನಲ್ಲಿಯ ಭಾರತೀಯ ರಾಯಭಾರ ಕಚೇರಿ ಕಟ್ಟಡದ ಮೇಲಿನ ತ್ರಿವರ್ಣ ಧ್ವಜವನ್ನು ಖಾಲಿಸ್ತಾನ್ ಪರ ಪ್ರತಿಭಟನಾಕಾರರ ಗುಂಪೊಂದು ಕೆಳಗಿಳಿಸಿತ್ತು. ಇದು ರಾಜತಾಂತ್ರಿಕ ವಿನಿಮಯಗಳಲ್ಲಿ ಉದ್ವಿಗ್ನತೆಯ ಹಂತಕ್ಕೆ ಕಾರಣವಾಗಿತ್ತು, ಭಾರತವು ಇಲ್ಲಿರುವ ಬ್ರಿಟಿಷ್ ರಾಯಭಾರ ಕಚೇರಿ ಮತ್ತು ಬ್ರಿಟನ್ ರಾಯಭಾರಿಗಳ ನಿವಾಸದ ಭದ್ರತೆಯನ್ನು ಕೆಳಮಟ್ಟಕ್ಕಿಳಿಸಿತ್ತು. ತನ್ನ ರಾಜತಾಂತ್ರಿಕರಿಗೆ ಕಟ್ಟುನಿಟ್ಟಿನ ಭದ್ರತೆಯನ್ನು ಒದಗಿಸುವಂತೆ ಭಾರತವು ಬ್ರಿಟನ್ ಅಧಿಕಾರಿಗಳನ್ನು ಆಗ್ರಹಿಸುತ್ತಿದೆ.