ವಿಶ್ವಸಂಸ್ಥೆಯ ಮುಖ್ಯಸ್ಥ ಗುಟೆರೆಸ್ ಗೆ ಇಸ್ರೇಲ್ ಪ್ರವೇಶ ನಿಷೇಧವನ್ನು ಟೀಕಿಸುವ 104 ದೇಶಗಳ ಪತ್ರಕ್ಕೆ ಸಹಿ ಹಾಕುವುದರಿಂದ ದೂರವುಳಿದ ಭಾರತ
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ (Photo:X/@antonioguterres)
ವಾಶಿಂಗ್ಟನ್: ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರಿಗೆ ಇಸ್ರೇಲ್ ಪ್ರವೇಶಿಸದಂತೆ ಇಸ್ರೇಲ್ ಹೇರಿರುವ ನಿಷೇಧವನ್ನು ಖಂಡಿಸಿ ವಿವಿಧ ಯುರೋಪಿಯನ್, ಆಫ್ರಿಕನ್ ಮತ್ತು ಗ್ಲೋಬಲ್ ಸೌತ್ ರಾಷ್ಟ್ರಗಳು ಸೇರಿದಂತೆ 104 ದೇಶಗಳ ಬೆಂಬಲಿತ ಪತ್ರಕ್ಕೆ ಸಹಿ ಹಾಕುವುದರಿಂದ ಭಾರತ ದೂರವುಳಿದಿದೆ ಎಂದು thehindu.com ವರದಿ ಮಾಡಿದೆ.
ಭಾರತವು ಈ ಹಿಂದೆ ಫೆಲೆಸ್ತೀನ್ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಇಸ್ರೇಲ್ ಅನ್ನು ಟೀಕಿಸುವ ಜಾಗತಿಕ ಹಲವಾರು ನಿರ್ಣಯಗಳಿಗೆ ತನ್ನ ಬೆಂಬಲ ನೀಡಿತ್ತು. ಆದರೆ ಈ ಬಾರಿ ಭಾರತದ ನಡೆ ಭಿನ್ನವಾಗಿದೆ.
ಚಿಲಿಯ ವಿದೇಶಾಂಗ ಸಚಿವಾಲಯವು ಬಿಡುಗಡೆ ಮಾಡಿದ ಪತ್ರವು ವಿಶ್ವ ಸಂಸ್ಥೆಯ ನಾಯಕತ್ವವನ್ನು ಗೌರವಿಸುವಂತೆ ಕರೆ ನೀಡಿದೆ. ಪ್ರಧಾನ ಕಾರ್ಯದರ್ಶಿ ಮತ್ತು ಅವರ ಕೆಲಸಕ್ಕೆ ಬೆಂಬಲವನ್ನು ಪುನರುಚ್ಚರಿಸಿದೆ. 15 ಮಂದಿ ಸದಸ್ಯರಿರುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಳ್ಳುತ್ತಿರುವ ಉದ್ವಿಗ್ನತೆ ಶಮನಗೊಳಿಸುವ ಹೇಳಿಕೆಯನ್ನು ಅನುಸರಿಸಿದೆ. ಅಲ್ಲದೇ ವಿಶ್ವ ಸಂಸ್ಥೆಯ ಕಾರ್ಯದರ್ಶಿಯ ಜೊತೆ ಸಂಘರ್ಷಕ್ಕಿಳಿಯುವ ಯಾವುದೇ ನಿರ್ಧಾರವು ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಒತ್ತಿ ಹೇಳಿದೆ.
ದಕ್ಷಿಣ ಏಷ್ಯಾದ ಹೆಚ್ಚಿನ ನೆರೆಯ ರಾಷ್ಟ್ರಗಳು, ಹಾಗೆಯೇ ಪಶ್ಚಿಮ ಏಷ್ಯಾ, ದಕ್ಷಿಣ ಅಮೆರಿಕಾ ಮತ್ತು ಆಫ್ರಿಕಾದ ರಾಷ್ಟ್ರಗಳು ಯುಎನ್ನಲ್ಲಿ ಪ್ರಸ್ತುತಪಡಿಸಿದ ಪತ್ರಕ್ಕೆ ಸಹಿ ಹಾಕುವಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳೊಂದಿಗೆ ಸೇರಿಕೊಂಡಿವೆ. ಈ ಪತ್ರವು ವಿಶ್ವ ಸಂಸ್ಥೆಯ ಕಾರ್ಯದರ್ಶಿಯನ್ನು ನಿಷೇಧಸುವ ಇಸ್ರೇಲ್ನ ನಿರ್ಧಾರದ ಬಗ್ಗೆ ಆಳವಾದ ಕಾಳಜಿ ಮತ್ತು ಖಂಡನೆ ವ್ಯಕ್ತಪಡಿಸಿದೆ.
ಘರ್ಷಣೆಗಳಿಗೆ ಮಧ್ಯಸ್ಥಿಕೆ ವಹಿಸುವ ಮತ್ತು ಮಾನವೀಯ ನೆರವು ನೀಡುವ ತನ್ನ ಆದೇಶವನ್ನು ಪೂರೈಸುವ ವಿಶ್ವಸಂಸ್ಥೆಯ ಸಾಮರ್ಥ್ಯವನ್ನು ಇಂತಹ ಕ್ರಮಗಳು ದುರ್ಬಲಗೊಳಿಸುತ್ತವೆ ಎಂದು ಪತ್ರವು ಪ್ರತಿಪಾದಿಸಿದೆ.
ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿ ದಾಳಿಗಳನ್ನು ಟೀಕಿಸಲು ಗುಟೆರೆಸ್ ವಿಫಲರಾಗಿದ್ದಾರೆ ಎಂದು ಆರೋಪಿಸಿ ಅಕ್ಟೋಬರ್ 2 ರಂದು ಇಸ್ರೇಲ್ ವಿದೇಶಾಂಗ ಸಚಿವ ಕಾಟ್ಜ್ ಅವರು ಗುಟೆರಸ್ ನಿಷೇಧಿಸುವ ಘೋಷಣೆ ಹೊರಡಿಸಿದರು. ಗುಟೆರೆಸ್ ತನ್ನ ನಿಷ್ಕ್ರಿಯತೆಯ ಪರಿಣಾಮವಾಗಿ ಇಸ್ರೇಲ್ ನೆಲದಲ್ಲಿ ಕಾಲಿಡಲು ಅರ್ಹರಲ್ಲ ಎಂದು ಕಾಟ್ಜ್ ಪ್ರತಿಪಾದಿಸಿದ್ದರು.
ಪತ್ರಕ್ಕೆ ಭಾರತ ಸಹಿ ಹಾಕದೇ ಇರುವ ನಿರ್ಧಾರದ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ.