63,000 ಕೋಟಿ ರೂ. ರಫೇಲ್-ಎಂ ಜೆಟ್ ಖರೀದಿ ಒಪ್ಪಂದಕ್ಕೆ ಭಾರತ- ಫ್ರಾನ್ಸ್ ಸಹಿ

ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ಭಾರತೀಯ ನೌಕಾ ಪಡೆಗೆ ಸುಮಾರು 63,000 ಕೋಟಿ ರೂ. ಮೌಲ್ಯದ 26 ರಫೇಲ್-ಸಾಗರ ಯುದ್ಧ ವಿಮಾನ ಖರೀದಿಯ ಬಹು ನಿರೀಕ್ಷಿತ ಒಪ್ಪಂದಕ್ಕೆ ಭಾರತ ಹಾಗೂ ಪ್ರಾನ್ಸ್ ಸೋಮವಾರ ಸಹಿ ಹಾಕಿದೆ.
ಭಾರತದ ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ಹಾಗೂ ಫ್ರಾನ್ಸ್ನ ರಾಯಭಾರಿ ಡಾ. ಥೈರಿ ಮಾತೊ ಅವರ ಉಪಸ್ಥಿತಿಯಲ್ಲಿ ಸಹಿ ಹಾಕಲಾಯಿತು.
ಈ ಒಪ್ಪಂದ ವಿಮಾನಗಳ ನಿರ್ವಹಣೆ, ಸಾಗಟ ಬೆಂಬಲ ಹಾಗೂ ವೈಯುಕ್ತಿಕ ತರಬೇತಿಯನ್ನು ಒಳಗೊಂಡಿರಲಿದೆ. ಇದು ‘ಆತ್ಮ ನಿರ್ಭರ ಭಾರತ್’ ಉಪಕ್ರಮದಲ್ಲಿ ಮಹತ್ವದ ಹೆಜ್ಜೆಯಾಗಿದೆ.
ಈ ಒಪ್ಪಂದದಂತೆ ರಫೇಲ್ ಯುದ್ಧ ವಿಮಾನಗಳು ಐದು ವರ್ಷಗಳ ಬಳಿಕ ಭಾರತೀಯ ನೌಕಾ ಪಡೆ ಸೇರಲಿವೆ. ಈ ವರೆಗೆ ಭಾರತದ ವಾಯು ಪಡೆ 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಭದ್ರತೆಗಿರುವ ಸಂಪುಟ ಸಮಿತಿ (ಸಿಸಿಎಸ್) 22 ಏಕ ಆಸನದ ರಫೇಲ್ ಎಂ ಯುದ್ಧ ವಿಮಾನ ಹಾಗೂ ನಾಲ್ಕು ಅವಳಿ ಆಸನಗಳ ತರಬೇತಿ ವಿಮಾನ ಖರೀದಿ ಒಪ್ಪಂದಕ್ಕೆ ಈ ತಿಂಗಳ ಆರಂಭದಲ್ಲಿ ಅನುಮೋದನೆ ನೀಡಿತ್ತು.