ಪಾಕ್ ವಶದಲ್ಲಿರುವ ಭಾರತೀಯ ಕೈದಿಗಳ ಬಿಡುಗಡೆಗೆ ಕೇಳಿಕೊಂಡ ಭಾರತ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ : ತಮ್ಮ ಶಿಕ್ಷೆಯನ್ನು ಪೂರ್ಣಗೊಳಿಸಿರುವ 184 ಭಾರತೀಯ ಕೈದಿಗಳ ಬಿಡುಗಡೆ ಮತ್ತು ವಾಪಸಾತಿ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಭಾರತವು ಸೋಮವಾರ ಪಾಕಿಸ್ತಾನವನ್ನು ಕೇಳಿಕೊಂಡಿದೆ.
ಇದರ ಜೊತೆಗೆ ಪಾಕ್ ವಶದಲ್ಲಿರುವ, ಭಾರತೀಯರೆಂದು ನಂಬಲಾಗಿರುವ 12 ನಾಗರಿಕ ಕೈದಿಗಳಿಗೆ ರಾಯಭಾರ ಕಚೇರಿಯನ್ನು ಸಂಪರ್ಕಿಸಲು ತಕ್ಷಣವೇ ಅವಕಾಶವನ್ನು ನೀಡುವಂತೆಯೂ ಭಾರತವು ಕೇಳಿಕೊಂಡಿದೆ.
ಉಭಯ ರಾಷ್ಟ್ರಗಳಿಂದ ತಮ್ಮ ವಶದಲ್ಲಿರುವ ನಾಗರಿಕ ಕೈದಿಗಳು ಮತ್ತು ಮೀನುಗಾರರ ಪಟ್ಟಿಗಳ ವಿನಿಮಯದ ಸಂದರ್ಭದಲ್ಲಿ ಭಾರತವು ಈ ಕೋರಿಕೆಯನ್ನು ಮಂಡಿಸಿದೆ. 2008ರ ಒಪ್ಪಂದದಡಿ ಈ ಪಟ್ಟಿಗಳನ್ನು ಪ್ರತಿ ವರ್ಷ ಜ.1 ಮತ್ತು ಜು.1ರಂದು ವಿನಿಮಯ ಮಾಡಿಕೊಳ್ಳಲಾಗುತ್ತದೆ.
ಭಾರತವು ತನ್ನ ವಶದಲ್ಲಿರುವ, ಪಾಕ್ ಪ್ರಜೆಗಳಾಗಿರುವ ಅಥವಾ ಪಾಕಿಸ್ತಾನಿಗಳು ಎಂದು ನಂಬಲಾಗಿರುವ 337 ನಾಗರಿಕ ಕೈದಿಗಳು ಮತ್ತು 81 ಮೀನುಗಾರರ ಪಟ್ಟಿಯನ್ನು ಹಂಚಿಕೊಂಡಿದೆ. ಇದೇ ರೀತಿ ಪಾಕಿಸ್ತಾನವು, ಭಾರತದ ಪ್ರಜೆಗಳಾಗಿರುವ ಅಥವಾ ಭಾರತೀಯರು ಎಂದು ನಂಬಲಾಗಿರುವ 47 ನಾಗರಿಕ ಕೈದಿಗಳು ಮತ್ತು 184 ಮೀನುಗಾರರ ಪಟ್ಟಿಯನ್ನು ಹಂಚಿಕೊಂಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತಿಳಿಸಿದೆ.
ಮೀನುಗಾರರು ಸೇರಿದಂತೆ ಪಾಕ್ ಪ್ರಜೆಗಳು ಎಂದು ನಂಬಲಾಗಿರುವ 67 ಕೈದಿಗಳ ವಾಪಸಾತಿಯು ಪಾಕಿಸ್ತಾನದಿಂದ ಗುರುತು ದೃಢೀಕರಣ ಅಗತ್ಯದಿಂದಾಗಿ ಬಾಕಿಯುಳಿದಿದೆ. ಹೀಗಾಗಿ ಗುರುತು ದೃಢೀಕರಣ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆಯೂ ಭಾರತವು ಪಾಕ್ ಗೆ ಸೂಚಿಸಿದೆ.
ಸರಕಾರದ ನಿರಂತರ ಪ್ರಯತ್ನಗಳಿಂದಾಗಿ 2014ರಿಂದ 2,639 ಭಾರತೀಯ ಮೀನುಗಾರರು ಮತ್ತು 67 ಭಾರತೀಯ ನಾಗರಿಕ ಕೈದಿಗಳು ಪಾಕಿಸ್ತಾನದಿಂದ ಸ್ವದೇಶಕ್ಕೆ ವಾಪಸಾಗಿದ್ದಾರೆ. ಇದರಲ್ಲಿ 2023ರಲ್ಲಿ ಪಾಕ್ ನಿಂದ ವಾಪಸಾಗಿರುವ 487 ಭಾರತೀಯ ಮೀನುಗಾರರು ಮತ್ತು ಒಂಭತ್ತು ಭಾರತೀಯ ನಾಗರಿಕ ಕೈದಿಗಳು ಸೇರಿದ್ದಾರೆ ಎಂದು ಸಚಿವಾಲಯವು ತಿಳಿಸಿದೆ.